ಬೆಂಗಳೂರು, ಆ.27-ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸುವುದಕ್ಕೆ ಸೀಮಿತವಲ್ಲ, ಅದು ಗೌರವಪೂರ್ವಕ ಉದ್ಯೋಗ ಒದಗಿಸುವ ಇಲಾಖೆಯನ್ನಾಗಿ ಸುಧಾರಣೆ ಮಾಡುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಬಡ ಮಕ್ಕಳಿಗೆ ವಿದ್ಯಾರ್ಥಿ ನಿಲಯ ಒದಗಿಸಿ ಉಚಿತ ಊಟ ಮತ್ತು ಶಿಕ್ಷಣ ನೀಡುವುದರ ಜೊತೆಗೆ ವೃತ್ತಿ ಪರ ಕೋರ್ಸ್ಗಳನ್ನು ಆರಂಭಿಸುವ ಮೂಲಕ ಗೌರವಪೂರ್ವಕ ಉದ್ಯೋಗ ದೊರಕುವಂತೆ ಮಾಡಲಾಗುವುದು ಎಂದರು.
ಇಲಾಖೆ ಕಾರ್ಯವೈಖರಿ, ಕಾರ್ಯಕ್ರಮಗಳ ಬಗ್ಗೆ ನಾಳೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುವುದು.ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಪಾರ ಪ್ರಮಾಣದ ರಸ್ತೆ, ಸೇತುವೆ, ಕಟ್ಟಡಗಳು ಹಾನಿಗೀಡಾಗಿವೆ. ಹಾನಿಗೀಡಾಗಿರುವ ರಸ್ತೆ, ಸೇತುವೆಗಳ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗುವುದು. ರಾಜ್ಯದ 22 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ಜನರು ಸಂಕಷ್ಟ ಎದುರಿಸುವಂತಾಗಿದೆ. ಶೀಘ್ರದಲ್ಲೇ ಕೇಂದ್ರಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ನೆರವು ನೀಡುವಂತೆ ಕೋರಲಾಗುವುದು.ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಜ್ಯಸರ್ಕಾರ ಈಗಾಗಲೇ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ ಎಂದು ಹೇಳಿದರು.