ಜಮಖಂಡಿ, ಆ.27- ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಬಿಜೆಪಿಯ ಹೈಕಮಾಂಡ್ಗೆ ಇಷ್ಟವಿರಲಿಲ್ಲ. ವರಿಷ್ಠರನ್ನು ಗೋಗರೆದು ಮುಖ್ಯಮಂತ್ರಿ ಪದವಿ ಪಡೆದಿದ್ದಾರೆ.ಅವರನ್ನು ಕಟ್ಟಿ ಹಾಕಲು ಮೂವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸಂವಿಧಾನಾತ್ಮಕವಲ್ಲ, ಜೊತೆಗೆ ವಿಶೇಷ ಅಧಿಕಾರವೂ ಇರುವುದಿಲ್ಲ. ಮೂವರನ್ನು ಡಿಸಿಎಂ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಕಟ್ಟಿ ಹಾಕಲು ಮುಂದಾಗಿದೆ.
ಬಿಜೆಪಿಯಲ್ಲಿ ಹಿರಿತನಕ್ಕೆ ಬೆಲೆಯಿಲ್ಲ. ಈ ಹಿಂದೆ ಆರ್.ಅಶೋಕ್, ಈಶ್ವರಪ್ಪ ಅವರನ್ನು ಡಿಸಿಎಂ ಮಾಡಿದ್ದರು.ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಈಗ ಅವರನ್ನೆಲ್ಲಾ ಕಡೆಗಣಿಸಲಾಗಿದೆ.ಇದರಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಡಿಯೂರಪ್ಪನವರು ಎಷ್ಟು ದಿನ ಸಿಎಂ ಆಗಿರುತ್ತಾರೋ ಹೇಳಲಿಕ್ಕೆ ಆಗುವುದಿಲ್ಲ.
ಈ ಸರ್ಕಾರದಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಅದು ತಾನಾಗಿಯೇ ಬೀಳುತ್ತದೆ.ಮೂವರು ಡಿಸಿಎಂ ಮಾಡಿದ ಉದಾಹರಣೆಯೇ ಇಲ್ಲ. ಬಿಎಸ್ವೈಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಒತ್ತಾಯ ಪೂರ್ವಕವಾಗಿ ಮಾಡಲಾಗಿದ್ದು, ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಹೇಳಿದರು.