ಮೂರು ಮಂದಿ ಡಿಸಿಎಂಗಳ ಅಗತ್ಯವಿರಲಿಲ್ಲ-ಇದನ್ನು ಹೈಕಮಾಂಡ್ ಮಾಡಿದ್ದರೆ ವರಿಷ್ಠರದ್ದೇ ತಪ್ಪು-ಸಂಸದ ವಿ.ಶ್ರೀನಿವಾಸಪ್ರಸಾದ್

ಮೈಸೂರು, ಆ.27- ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿರುವುದರಿಂದ ಏನು ಪ್ರಯೋಜನವಾಗಲಿದೆ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್‍ಪ್ರಸಾದ್ ಸ್ವಪಕ್ಷವನ್ನೇ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಮೂರು ಮಂದಿಗೆ ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಮೂರು ಮಂದಿ ಡಿಸಿಎಂಗಳ ಅಗತ್ಯವಿರಲಿಲ್ಲ. ಒಂದು ವೇಳೆ ಇದನ್ನು ಹೈಕಮಾಂಡ್ ಮಾಡಿದ್ದರೆ ವರಿಷ್ಠರದ್ದೇ ತಪ್ಪು.ಜನರು ಎಲ್ಲವನ್ನು ನೋಡುತ್ತಿದ್ದಾರೆ. ಹೈಕಮಾಂಡ್‍ಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ ಎಂದು ತಿಳಿಸಿದರು.

ವರಿಷ್ಠರ ತೀರ್ಮಾನ ಸರಿಯಲ್ಲ ಎಂದ ಅವರು, ಶಾಸಕರು ಅಸಮಾಧಾನ ವ್ಯಕ್ತಪಡಿಸುವುದು, ಸಚಿವರು ಖಾತೆ ಬಗ್ಗೆ ಅತೃಪ್ತಿ ತೋರ್ಪಡಿಸುವುದು ಸರಿಯಲ್ಲ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು.ಇಲ್ಲವಾದಲ್ಲಿ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಿದರು.
ಜಾತೀಯತೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಮೀಸಲಾತಿಯೇ ಬೇಡ ಎನ್ನುವವರ ಜತೆ ಚರ್ಚಿಸಿ ಏನು ಮಾಡುವುದು ಎಂದು ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಹೇಳಿದ ಶ್ರೀನಿವಾಸ್ ಪ್ರಸಾದ್, ನಾನು ಒಳ ಮೀಸಲಾತಿ ವಿರೋಧಿಯಲ್ಲ. ಹನುಮಂತನ ಬಾಲದಂತೆ ಒಳಮೀಸಲಾತಿ ಬೆಳೆಯುತ್ತಿದೆ. ಹಾಗಾಗಿ ಇದಕ್ಕೊಂದು ಸದನ ಸಮಿತಿ ರಚನೆಯಾಗಬೇಕು ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಆಯೋಗ ರಚಿಸಬೇಕು.ಮಂಡಲ ಆಯೋಗದ ಮಾದರಿಯಲ್ಲಿ ಸಮಿತಿ ರಚಿಸಬೇಕು ಎಂದು ತಿಳಿಸಿದರು.
ಸಿಎಂಗೆ ಕೆಲಸ ಮಾಡಿಕೊಡಿ ಎಂದು 20 ಪತ್ರ ಬರೆದಿದ್ದರೂ ಒಂದು ಕೆಲಸ ಮಾಡಿಕೊಡಲಿಲ್ಲ ಎಂಬುದಾಗಿ ಸ್ವತಹ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಅವರೂ ಕೂಡಾ ಅತೃಪ್ತ ಶಾಸಕ ಎಂದು ಇದೇ ವೇಳೆ ಶ್ರೀನಿವಾಸ್ ಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ