ಬೆಂಗಳೂರು, ಆ.27- ಮುಂದಿನ ಮೂರು ವರ್ಷ ಹತ್ತು ತಿಂಗಳು ವಿಶ್ರಾಂತಿ ಪಡೆಯದೆÉ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಂತಹ ಪ್ರಬಲ ನಾಯಕತ್ವ, ದೇವ ದುರ್ಲಭರಂತಹ ಕಾರ್ಯಕರ್ತರಿದ್ದಾರೆ.ಮುಂದಿನ ದಿನಗಳಲ್ಲಿ ನಾವು ಪಕ್ಷವನ್ನು ಇನ್ನಷ್ಟು ಸಂಘಟಿಸಿ ಬರಲಿರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು ಎಂದು ಹೇಳಿದರು.
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳೀನ್ಕುಮಾರ್ ಕಟೀಲ್ ಅವರ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಂದಿನ ವಿಧಾನಸಭೆ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿದೆ. ಭಾರೀ ಬಹುಮತದೊಂದಿಗೆ ಗೆದ್ದು, ಅಧಿಕಾರ ಹಿಡಿಯಲು ಕಾರ್ಯಕರ್ತರು ಸಜ್ಜಾಗಬೇಕೆಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಜತೆಗೆ ಮಂಡ್ಯದಲ್ಲೂ ನಮ್ಮ ಬೆಂಬಲಿತ ಅಭ್ಯರ್ಥಿಯೇ ಗೆದ್ದರು.ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದಾಗಲೂ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲುವುದೆಂದರೆ ಅದು ಒಂದು ದಾಖಲೆಯೇ ಸರಿ.ಎಲ್ಲಾ ಪಕ್ಷಗಳಿಗಿಂತಲೂ ಬಿಜೆಪಿ ಸಂಘಟನೆ ಸಾಕಷ್ಟು ಪ್ರಬಲವಾಗಿದೆ. ನೀವು ಯಾವುದಕ್ಕೂ ದೃತಿಗೆಡಬೇಕಾದ ಅಗತ್ಯವಿಲ್ಲ .ನಿಮ್ಮ ಜತೆ ಕಾರ್ಯಕರ್ತರ ದಂಡೇ ಕೈಜೋಡಿಸಲಿದೆ.ಧೈರ್ಯವಾಗಿ ಮುನ್ನುಗ್ಗಿ ಎಂದು ನಳೀನ್ಕುಮಾರ್ ಕಟೀಲ್ ಅವರನ್ನು ಹುರಿದುಂಬಿಸಿದರು.
ನೀವು ಮೂಲತಃ ಸಂಘಟನೆಯಿಂದಲೇ ಬಂದವರು.ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದಲ್ಲಿ ಯಾವ ರೀತಿ ಸಂಘಟನೆ ಮಾಡಿದ್ದೀರಿ ಎಂಬುದು ವರಿಷ್ಟರಿಗೆ ತಿಳಿದಿದೆ. ಆದ್ದರಿಂದಲೇ ನಿಮಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.ನಿಷ್ಟಾವಂತ ಕಾರ್ಯಕರ್ತರ ಪಡೆ ನಿಮ್ಮೊಂದಿಗಿರುವಾಗ ಯಾವುದಕ್ಕೂ ತಲೆ ಕೆಡೆಸಿಕೊಳ್ಳಬೇಡಿ.ನಿಮ್ಮ ಜತೆ ಕೈಗೆ ಕೈ, ಹೆಜ್ಜೆಗೆ ಹೆಜ್ಜೆ ಹಾಕಲು ಸಿದ್ದರಿದ್ದೇವೆ. ಪಕ್ಷ ಸಂಘಟನೆಗೆ ಎಲ್ಲಿಯೂ ಕೊರತೆಯಾಗದಂತೆ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಬೇಕೆಂದು ಯಡಿಯೂರಪ್ಪ ಸಲಹೆ ಮಾಡಿದರು.
ರಾಜ್ಯದಲ್ಲಿ ನಾಲ್ಕೂವರೆ ದಶಕಗಳ ನಂತರ ಭೀಕರ ಅತಿವೃಷ್ಟಿ ಉಂಟಾಗಿದೆ. ನಾನು ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಯಿತು.ಎಲ್ಲೆಲ್ಲಿ ಪ್ರವಾಹ ಉಂಟಾಗಿದೆಯೋ ಅಂತಹ ಕಡೆ ಪ್ರವಾಸ ಮಾಡಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ.ಈಗಾಗಲೇ ಕೇಂದ್ರದಿಂದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ.ನಮಗೆ ನಿರೀಕ್ಷೆಗೂ ಮೀರಿದ ಆರ್ಥಿಕ ನೆರವು ಕೇಂದ್ರದಿಂದ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆಂಬ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಮನವಿಗೆ ದೇಶದ ಜನತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನವನ್ನೂ ನೀಡದೆ ಹೀನಾಯವಾಗಿ ಸೋಲಿಸಿದ್ದಾರೆ.ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ.ವಾರದ 24 ಗಂಟೆಯೂ ಕೆಲಸ ಮಾಡುವಂತಹ ನಿಷ್ಠಾವಂತ ಕಾರ್ಯಕರ್ತರಿದ್ದಾರೆ.ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು.ಸಂಘಟನೆ ನಿಮ್ಮ ಗುರಿಯಾಗಿರಬೇಕು.ನಾನೂ ಸೇರಿದಂತೆ ಎಲ್ಲಾ ನಾಯಕರು ಅಗತ್ಯವಾದ ಮಾರ್ಗದರ್ಶನ ಮಾಡುತ್ತೇವೆ. ಹಿರಿಯ ನಾಯಕರ ಸಲಹೆಯಂತೆ ಪಕ್ಷವನ್ನು ಮುನ್ನಡೆಸಬೇಕೆಂದು ಸಲಹೆ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ನಾನೊಬ್ಬ ಆರ್ಎಸ್ಎಸ್ನ ನಿಷ್ಟಾವಂತ ಕಾರ್ಯಕರ್ತ.ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ನನ್ನನ್ನು ಗುರುತಿಸಿ ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಇದಕ್ಕಾಗಿ ನಾನು ಆರ್ಎಸ್ಎಸ್ಗೆ ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಮಾತ್ರ ಒಬ್ಬ ಸಾಮಾನ್ಯ ಕಾರ್ಯಕರ್ತ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ , ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನಾನೇ ನಿದರ್ಶನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ.ನನ್ನನ್ನು ಗುರುತಿಸಿ ಲೋಕಸಭೆಗೆ ಪಕ್ಷದವರು ಟಿಕೆಟ್ ನೀಡಿದರು.ಮೂರು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಇಷ್ಟು ದೊಡ್ಡ ಹುದ್ದೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಇದೀಗ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಯಡಿಯೂರಪ್ಪನವರ ಮಾರ್ಗದರ್ಶ, ಸಂಘ ಪರಿವಾರದ ನಾಯಕರ ಸಲಹೆ ಪಡೆದು ಪಕ್ಷವನ್ನು ಇನ್ನಷ್ಟು ಪ್ರಬಲವಾಗಿ ಸಂಘಟಿಸುವುದು ನನ್ನ ಮುಂದಿನ ಗುರಿ.ಮಾತನಾಡಲು ಬಾರದ ನನಗೆ ಮಾತು ಕಲಿಸಿದ್ದು ಆರ್ಎಸ್ಎಸ್. ಅವರ ಸಲಹೆಯಂತೆ ಪಕ್ಷವನ್ನು ಸಂಘಟಿಸುವುದಾಗಿ ವಾಗ್ದಾನ ಮಾಡಿದರು.
ನನಗೀಗ ಪಕ್ಷವನ್ನು ಮುನ್ನೆಡೆಸುತ್ತೇನೆ ಎಂಬ ವಿಶ್ವಾಸ ಬಂದಿದೆ. ಯಡಿಯೂರಪ್ಪನವರಂತಹ ಹಿರಿಯರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನಾಯಕರು ಇರುವಾಗ ನನಗೆ ಯಾವ ಅಂಜು ಅಳುಕು ಇಲ್ಲ. ಕಾರ್ಯಕರ್ತರ ದಂಡೇ ನನ್ನೊಂದಿಗಿರುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುತ್ತೇನೆ. ಯಾರೊಬ್ಬರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲೆಲ್ಲಿ ಪಕ್ಷ ಸಂಘಟನೆ ಕೊರತೆ ಇದೆಯೇ ಅಂತಹ ಕಡೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇಲ್ಲಿ ನಾಯಕರು ಮತ್ತು ಕಾರ್ಯಕರ್ತರ ನಡುವೆ ವ್ಯತ್ಯಾಸವಿಲ್ಲದಂತೆ ಪಕ್ಷ ಸಂಘಟಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಡಾ.ಅಶ್ವತ್ಥನಾರಾಯಣ, ಕೋಟಾ ಶ್ರೀನಿವಾಸ್ ಪ್ರಸಾದ್, ಸಿ.ಟಿ.ರವಿ, ಪ್ರಭು ಚೌವ್ಹಾಣ್ ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಸಚಿವ ಆರ್.ಅಶೋಕ್ ಅವರ ಗೈರು ಕಾರ್ಯಕ್ರಮದಲ್ಲಿ ಎದ್ದುಕಾಣುತ್ತಿತ್ತು.