ಸರ್ಕಾರದಲ್ಲಿ ಉಂಟಾಗಿರುವ ಅಸಮಾಧಾನ ಹಿನ್ನಲೆ-ಶಾಸಕರಾದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಸಂಪುಟಕ್ಕೆ

ಬೆಂಗಳೂರು, ಆ.26-ಸರ್ಕಾರದಲ್ಲಿ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಇಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಹಾಗೂ ಬೆಳಗಾವಿ ಜಿಲ್ಲೆ ಅರಭಾವಿಯ ಉಮೇಶ್‍ಕತ್ತಿ ನಾಳೆ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ನಾಳೆ ಸಂಜೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲಿಂಬಾವಳಿ ಮತ್ತು ಉಮೇಶ್ ಕತ್ತಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಈ ಮೂಲಕ ಸಿಎಂ ಯಡಿಯೂರಪ್ಪನವರ ಸಂಪುಟಕ್ಕೆ 19 ಮಂದಿ ಸಚಿವರು ಸೇರ್ಪಡೆಯಾದಂತಾಗಲಿದೆ.
ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಕಳೆದ ಮಂಗಳವಾರ ಸಂಪುಟ ವಿಸ್ತರಣೆಯಾದ ನಂತರ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟರು.

ಉಮೇಶ್ ಕತ್ತಿಯನ್ನು ಸಂಪುಟದಿಂದ ದೂರ ಇಟ್ಟರೆ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ. ಅವರನ್ನು ಕಡೆಗಣಿಸಿದರೆ ಸಮ್ಮಿಶ್ರಸರ್ಕಾರಕ್ಕೆ ಉಂಟಾದ ಗತಿಯೇ ನಮಗೂ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ವರಿಷ್ಠರು ಉಮೇಶ್ ಕತ್ತಿ ಮತ್ತು ಅರವಿಂದಲಿಂಬಾವಳಿಯವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹಸಿರು ನಿಶಾನೆ ತೋರಿದ್ದಾರೆ.

ಈಗಾಗಲೇ ಕತ್ತಿ ಮತ್ತು ಲಿಂಬಾವಳಿಗೆ ಸಿಎಂ ಮಾಹಿತಿ ನೀಡಿದ್ದು, ನಾಳೆ ರಾಜಭವನಕ್ಕೆ ಆಗಮಿಸುವಂತೆ ಸೂಚನೆ ಕೊಟ್ಟಿದ್ದಾರೆ. ಕಳೆದ ಮಂಗಳವಾರ ಸಚಿವ ಸಂಪುಟ ರಚನೆಯಾದ ಬಳಿಕ ಕತ್ತಿಯನ್ನು ಸಂಪುಟದಿಂದ ದೂರ ಇಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಪಕ್ಷವನ್ನೇ ತೊರೆಯುವ ತೀರ್ಮಾನಕ್ಕೆ ಬಂದಿದ್ದರು.

ಶಾಸಕರಾದ ಅಭಯ್‍ಪಾಟೀಲ್, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಸೇರಿದಂತೆ ಮತ್ತಿತರ ಜೊತೆ ಮಾತುಕತೆ ನಡೆಸಿದ್ದರು. ಸಾಲದ್ದಕ್ಕೆ ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತೃ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಯಡಿಯೂರಪ್ಪ ಉಮೇಶ್‍ಕತ್ತಿಯನ್ನು ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಿದರು.

ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ.ವರಿಷ್ಠರ ಜೊತೆ ನಾನು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನೀವು ಮುಜುಗರ ಸೃಷ್ಟಿಸಿದರೆ ಅಸಮಾಧಾನಿತ ಶಾಸಕರು ಕೂಡ ಇದೇ ಹಾದಿ ತುಳಿಯಲಿದ್ದಾರೆ. ಮೂರ್ನಾಲ್ಕು ದಿನಗಳ ಮಟ್ಟಿಗೆ ಕಾಯುವಂತೆ ಸೂಚಿಸಿದ್ದರು.
ಇಂದು ಬೆಳಗ್ಗೆ ಆರ್‍ಎಸ್‍ಎಸ್ ನಾಯಕರ ಜೊತೆ ಸಂಪುಟ ವಿಸ್ತರಣೆ ಕುರಿತಂತೆ ಯಡಿಯೂರಪ್ಪ ಔಪಚಾರಿಕ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅರವಿಂದ ಲಿಂಬಾವಳಿ ಅವರನ್ನು ಕೆಲ ಕಾರಣಗಳಿಂದ ಸಂಪುಟದಿಂದ ದೂರ ಇಡಲಾಗಿತ್ತು. ಇದರಿಂದ ಮುನಿಸಿಕೊಂಡು ಅವರು ಕೂಡ ಬೇಸರವ್ಯಕ್ತಪಡಿಸಿದ್ದರು.

ಮೂರು ದಿನಗಳ ಹಿಂದೆ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್‍ನೀಡಿತ್ತು.ಇದೀಗ ಲಿಂಬಾವಳಿಯನ್ನೂ ಸಂಪುಟಕ್ಕೆ ತೆಗೆದುಕೊಳ್ಳಲು ವರಿಷ್ಠರು ಅನುಮತಿ ನೀಡಿದ್ದಾರೆ. ಹೀಗಾಗಿ ನಾಳೆ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಲಿಂಬಾವಳಿ ಮತ್ತು ಕತ್ತಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸುದ್ದಿ ಹಬ್ಬುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರಾದ ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಚಂದ್ರಪ್ಪ , ತಿಪ್ಪಾರೆಡ್ಡಿ, ಶಿವನಗೌಡನಾಯಕ್, ರಾಜೂಗೌಡ ನಾಯಕ್ ಸೇರಿದಂತೆ ಮತ್ತಿತರರು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಿಎಂ ಮೇಲೆ ಒತ್ತಡ ನೀತಿ ಅನುಸರಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ