ಬೆಂಗಳೂರು, ಆ.26- ವಿಪಕ್ಷ ನಾಯಕನ ಆಯ್ಕೆ, ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚೆಗೆ ನಡೆಯಬೇಕಿದ್ದ ಕಾಂಗ್ರೆಸ್ ನಾಯಕರ ಉನ್ನತ ಮಟ್ಟದ ಸಭೆ ದಿಢೀರ್ ಮುಂದೂಡಿಕೆಯಾಗಿದೆ.
ಕಾಂಗ್ರೆಸ್ ನಾಯಕರ ನಡುವಿನ ಹಗ್ಗಜಗ್ಗಾಟ ತೀವ್ರವಾಗಿದ್ದು, ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ಮತ್ತಷ್ಟು ಕದಡುವ ಬದಲು ಸದ್ಯಕ್ಕೆ ಯಾವುದೇ ಹೊಸ ಬದಲಾವಣೆಗಳಿಗೆ ಕೈ ಹಾಕದೆ ತೆಪ್ಪಗಿರಲು ಹೈಕಮಾಂಡ್ ನಿರ್ಧರಿಸಿದೆ.
ವಿಪಕ್ಷ ನಾಯಕನ ಆಯ್ಕೆಯಲ್ಲಿ ಗೊಂದಲ:
ನೂತನ ಸರ್ಕಾರದಲ್ಲಿ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು, ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿ, ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆಗಳಿವೆ. ಈಗ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದವರು ಮುಂದೆ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ಪ್ರಸ್ತುತ ವಿರೋಧ ಪಕ್ಷದ ನಾಯಕನಾಗಲು ಭಾರೀ ಪೈಪೆÇೀಟಿಯಿದೆ.
ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು.ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಯ್ಕೆ ಸರ್ವಾನುಮತದ್ದು ಎಂದು ಪ್ರಕಟಿಸಲಾಗಿತ್ತು.ಸರ್ವಾನುಮತದಿಂದ ಆಯ್ಕೆಯಾದ ತಮ್ಮನ್ನು ವಿರೋಧ ಪಕ್ಷದ ನಾಯಕನನ್ನಾಗಿ ಪ್ರಕಟಿಸಬೇಕಿತ್ತು.ಅದನ್ನು ಬಿಟ್ಟು ಹೈಕಮಾಂಡ್ ಮೀನಾಮೇಷ ಎಣಿಸುತ್ತಿದ್ದು, ಎಲ್ಲರ ಅಭಿಪ್ರಾಯ ಕೇಳಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಪಡೆದ ನಂತರವೇ ಪ್ರತಿಪಕ್ಷದ ನಾಯಕನ ಆಯ್ಕೆಯಾಗಬೇಕು.ಆತುರದಿಂದ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಒತ್ತಡಗಳು ಕಾಂಗ್ರೆಸ್ನ ಇತರ ನಾಯಕರಿಂದ ಕೇಳಿ ಬಂದಿವೆ.
ಈವರೆಗೂ ಸಂಸತ್ ಅಧಿವೇಶನ, ಜಮ್ಮು ಕಾಶ್ಮೀರದ 370 ವಿಧಿ ರದ್ದು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಸೇರಿದಂತೆ ಇತರ ವಿಷಯಗಳಲ್ಲಿ ಬ್ಯೂಸಿಯಾಗಿದ್ದ ಕಾಂಗ್ರೆಸ್ ನಾಯಕರು ಈಗ ಕರ್ನಾಟಕ ರಾಜಕಾರಣದತ್ತ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿಗೆ ಬಂದು ಸಮಾಲೋಚನೆ ನಡೆಸುವುದಾಗಿ ಮಾಹಿತಿ ನೀಡಿದ್ದರು. ಹೈಕಮಾಂಡ್ನಿಂದ ನಾಯಕರು ಬರುವ ಸೂಚನೆ ಸಿಗುತ್ತಿದ್ದಂತೆ ಸಿದ್ದರಾಮಯ್ಯ ಅವರು ನೆರೆ ಅಧ್ಯಯನ ಪ್ರವಾಸಕ್ಕಾಗಿ ಬಾದಾಮಿಗೆ ತೆರಳಿದ್ದಾರೆ. ಹೀಗಾಗಿ ಇಂದು ನಿಗದಿಯಾಗಿದ್ದ ಎಐಸಿಸಿ ಪ್ರಮುಖ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಕೆ.ಸಿ.ವೇಣುಗೋಪಾಲ್ ಅವರ ಪ್ರವಾಸ ದಿಢೀರ್ ರದ್ದಾಗಿದೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬೀದಿಗಿಳಿದು ಪ್ರತಿಭಟಿಸಬೇಕಿದ್ದ ಕಾಂಗ್ರೆಸ್ಗೆ ಪದಾಧಿಕಾರಿಗಳಿಲ್ಲದೆ ಪರದಾಡುವಂತಾಗಿದೆ. ಈ ಮೊದಲು ಪದಾಕಾರಿಗಳಾಗಿದ್ದವರನ್ನು ಏಕಾಏಕಿ ಮೂರು ತಿಂಗಳ ಹಿಂದೆ ವಜಾಗೊಳಿಸಲಾಗಿದೆ.ಈವರೆಗೂ ಹೊಸ ಪದಾಧಿಕಾರಿಗಳ ನೇಮಕವಾಗಿಲ್ಲ. ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿದ್ದರೂ ಪಕ್ಷ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ವರಿಷ್ಠರು ರಾಜ್ಯ ನಾಯಕರ ಜೊತೆ ಚರ್ಚಿಸಿ ಹೊಸ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಬೇಕಿತ್ತು.ಆದರೆ ರಾಜ್ಯ ನಾಯಕರ ನಡುವಿನ ವೈಮನಸ್ಯದಿಂದ ವರಿಷ್ಠರ ಪ್ರವಾಸವೇ ರದ್ದಾಗಿದೆ.
ಮುಂದಿನ ಸೆಪ್ಟೆಂಬರ್ 15ರೊಳಗೆ ವಿಪಕ್ಷ ನಾಯಕನ ಆಯ್ಕೆ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.ಬಹುತೇಕ ಬುಧವಾರ ವರಿಷ್ಠರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.ಒಂದು ವೇಳೆ ಆಗಲೂ ಬರದಿದ್ದರೆ ಗೌರಿ ಗಣೇಶ್ ಹಬ್ಬದ ನಂತರವೇ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.