ದಿಲ್ಲಿ ನಾಯಕರ ವಿಳಂಬ ಧೋರಣೆ ಹಿನ್ನಲೆ-ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬೆಂಬಲಿಗರು

ಬೆಂಗಳೂರು, ಆ.26-ಸಂಪುಟ ರಚನೆ ಮತ್ತು ಸಚಿವರ ಖಾತೆ ಹಂಚಿಕೆ ವಿಚಾರವಾಗಿಬಿಜೆಪಿ ದೆಹಲಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸತಾಯಿಸುತ್ತಿರುವುದಕ್ಕೆ ಸಿಎಂ ಬೆಂಬಲಿಗರು ಆಕ್ರೋಶ ವ್ಯಕ್ತಪಟಿಸಿದ್ದಾರೆ.

ಮೈತ್ರಿ ಸರಕಾರ ಪತನದ ಬಳಿಕೆ ಸಿಎಂ ಪದಗ್ರಹಣ, ಸಂಪುಟ ರಚನೆ, ಅನರ್ಹರ ವಿಚಾರ ಮತ್ತು ಖಾತೆ ಹಂಚಿಕೆ, ಹೀಗೆ ಎಲ್ಲ ವಿಷಯದಲ್ಲಿಯೂ ದಿಲ್ಲಿ ನಾಯಕರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಎಸ್‍ವೈ ಬಣ ಆರೋಪಿಸಿದೆ.

ಮೈತ್ರಿ ಸರಕಾರ ಪತನದ ಬಳಿಕ ರಾಜ್ಯಪಾಲರ ಭೇಟಿಗೆ ಅನುಮತಿ ನೀಡಲೂ ಯಡಿಯೂರಪ್ಪ ಅವರನ್ನು ಮೂರು ದಿನ ಸತಾಯಿಸಿದ ಹೈಕಮಾಂಡ್ ಬಳಿಕ 26 ದಿನ ಸಂಪುಟ ರಚಿಸಲು ಅನುಮತಿ ನೀಡಲಿಲ್ಲ. ಈಗ ನೂತನ ಸಚಿವರಿಗೆ ಖಾತೆ ಹಂಚಲೂ ಸಿಎಂಗೆ ಅವಕಾಶ ನೀಡುತ್ತಿಲ್ಲ ಎಂದು ಬೆಂಬಲಿಗ ಪಡೆ ಬೇಸರಿಸಿದೆ.
ಸಂಪುಟ ರಚನೆ ಸಂದರ್ಭದಲ್ಲಿ ತನಗೆ ಬೇಕಾದವರಿಗೆ ಮಣೆ ಹಾಕುವ ಮೂಲಕ ಭಿನ್ನಮತದ ಭೂತ ಸೃಷ್ಟಿಸಿರುವ ಬಿಜೆಪಿ ಹೈಕಮಾಂಡ್ ಅದನ್ನು ಶಮನಗೊಳಿಸುವ ಗೋಜಿಗೇ ಹೋಗಿಲ್ಲ. ಅತ್ತ ಅನರ್ಹರ ಬಗ್ಗೆಯೂ ಸ್ಪಷ್ಟ ನಿಲುವು ತಾಳುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದು ತರ್ಕಿಸಲಾಗುತ್ತಿದೆ.

ಈ ಮಧ್ಯೆ ಅನರ್ಹರನ್ನು ದಿಲ್ಲಿ ನಾಯಕರ ಜೊತೆ ಭೇಟಿ ಮಾಡಿಸುವ ಸಲುವಾಗಿ ದಿಲ್ಲಿಗೆ ತೆರಳಿದ್ದ ಯಡಿಯೂರಪ್ಪನವರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡುವ ಸೌಜನ್ಯವನ್ನೂ ತೋರದಿರುವುದು ಸಿಎಂ ಅನುಯಾಯಿಗಳು ಕೆಂಡ ಕಾರುವಂತೆ ಮಾಡಿದೆ.
ಯಾರು ಏನೇ ಅಂದರೂ ರಾಜ್ಯದಲ್ಲಿ ಬಿಎಸ್‍ವೈ ಇಲ್ಲದೇ ಬಿಜೆಪಿ ಸದೃಢವಾಗಿರಲು ಸಾಧ್ಯವೇ ಇಲ್ಲ ಎಂಬುದನ್ನು ದೆಹಲಿ ವರಿಷ್ಠರು ಅರಿಯಬೇಕು. 2013ರ ಫಲಿತಾಂಶ ಏನಾಯಿತು ಎಂಬುದನ್ನು ಮರೆಯಬಾರದು ಎಂದು ಬಿಎಸ್ ವೈ ಬಣ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ