ಬೆಂಗಳೂರು, ಆ.26-ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ನಳೀನ್ ಕುಮಾರ್ ಕಟೀಲ್ ಅವರ ಅಧಿಕಾರ ಸ್ವೀಕಾರ ಸಮಾರಂಭ ನಾಳೆ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದ್ದು, ನೂತನ ಅಧ್ಯಕ್ಷರಿಗೆ ಹಾಲಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಸಿ.ಎನ್.ಅಶ್ವತನಾರಾಯಣ, ನಾಳೆ ಬೆಳಗ್ಗೆ 10.30 ರಿಂದ 11.45ರವರೆಗೆ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ನೂತನ ಅಧ್ಯಕ್ಷರಿಗೆ ಸಂಪ್ರದಾಯದಂತೆ ಹಾಲಿ ಅಧ್ಯಕ್ಷರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುವರು ಎಂದು ತಿಳಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ನೂತನ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳುವರು. ಅಲ್ಲಿಂದಲೇ ತೆರೆದ ವಾಹನ ಮೂಲಕ ಮೆರವಣಿಗೆ ನಡೆಸಿ ಬಳಿಕ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಳೀನ್ಕುಮಾರ್ ಕಟೀಲ್ ಸಂಘಟನೆ ಹಿನ್ನೆಲೆಯಿಂದ ಬಂದವರು.ಓರ್ವ ಕಾರ್ಯಕರ್ತರಾಗಿ ಪಕ್ಷ ವಹಿಸಿದ ಕೆಲಸವನ್ನು ಶಿಸ್ತಿನಿಂದ ನಿಭಾಯಿಸಿದ್ದಾರೆ.ಅವರೊಬ್ಬ ಉತ್ತಮ ವಾಗ್ಮಿಯೂ ಹೌದು.ಮುಂದೆ ಪಕ್ಷವನ್ನು ಉತ್ತಮವಾಗಿ ಸಂಘಟಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ಪ್ರತಿಯೊಬ್ಬರು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ.ಸಾಮಾನ್ಯ ಕಾರ್ಯಕರ್ತರಾಗಿದ್ದ ಅವರ ಸೇವೆಯನ್ನು ಗುರುತಿಸಿಯೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು.ಕಟೀಲ್ ಅವರು ಎಲ್ಲರ ಮಾರ್ಗದರ್ಶನ ಪಡೆದು ಪಕ್ಷವನ್ನು ಮುನ್ನಡೆಸುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.
ಬಿಜೆಪಿಯಲ್ಲಿ ಬೇರೆ ಪಕ್ಷಗಳಿಗಿಂತಲೂ ಹೆಚ್ಚಿನ ಆಂತರಿಕ ಪ್ರಜಾಪ್ರಭುತ್ವವಿದೆ. ಆದ್ದರಿಂದಲೇ ಪಕ್ಷದ ವರಿಷ್ಠರು ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎಂಬುದರ ಬಗ್ಗೆ ಚರ್ಚೆನಡೆಸಿಯೇ ಹೊಣೆಗಾರಿಕೆ ನೀಡುತ್ತಿದ್ದಾರೆ. ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಇಂತಹ ಸಣ್ಣಪುಟ್ಟ ಬಿಕ್ಕಟ್ಟುಗಳು ಸೃಷ್ಟಿಯಾಗುವುದು ಸರ್ವೇಸಾಮಾನ್ಯ. ಎಲ್ಲವೂ ಶೀಘ್ರದಲ್ಲೇ ಸುಖಾಂತ್ಯವಾಗಲಿದೆ ಎಂದು ಹೇಳಿದರು.
ಡಿಸಿಎಂ ಸ್ಥಾನದ ಬಗ್ಗೆ ತಿಳಿದಿಲ್ಲ. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಲೆಹರ್ಸಿಂಗ್, ವಕ್ತಾರರಾದ ಅಶ್ವತ್ನಾರಾಯಣ, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.