ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು-ಅಧಿಕಾರಿಗಳಿಗೆ ಸೂಚನೆ ಕೊಟ ಸಿಎಂ ಯಡಿಯೂರಪ್ಪ

ಬೆಂಗಳೂರು, ಆ.26-ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ತಕ್ಷಣವೇ ಹಿಂಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ರೈತ ಸಂಘಟನೆಗಳ ಮುಖಂಡರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿಎಸ್‍ವೈ, ರಾಜ್ಯದ ಯಾವ ಯಾವ ಭಾಗಗಳಲ್ಲಿ ರೈತರ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆಯೋ ಅವುಗಳನ್ನು ತತ್‍ಕ್ಷಣವೇ ವಾಪಸ್ ಪಡೆಯಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಹೋರಾಟದಲ್ಲಿ ದಾಖಲಾಗಿರುವ ಮೊಕದ್ದಮೆಗಳ ಸಂಪೂರ್ಣ ಮಾಹಿತಿ ಪಡೆದು ತಕ್ಷಣವೇ ವಾಪಸ್ ಪಡೆಯುವಂತೆಯೂ ಆದೇಶ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬೇರೆ ಬೇರೆ ಹೋರಾಟಗಳಲ್ಲಿ ಭಾಗಿಯಾಗಿದ್ದ ರೈತರ ಮೇಲೆ ಮೊಕದ್ದಮೆಗಳು ದಾಖಲಾಗಿವೆ. ಪರಿಣಾಮ ಪೆÇಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ರೈತರು ಅಲೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲೇ ಒಂದು ಕಡೆ ಮಳೆಯಾಗದೆ ಬರ ಇದೆ, ಮತ್ತೊಂದು ಕಡೆ ನೆರೆ ಹಾವಳಿ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಮೊಕದ್ದಮೆಗಳಿಗೆ ಅಲೆಯಲು ಅವರಿಗೆ ಹಣಕಾಸಿನ ನೆರವು ಯಾರು ಕೊಡುತ್ತಾರೆ. ತಿಂಗಳಿಗೆ ಎರಡೆರಡು ಬಾರಿ ಪೆÇಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡುತ್ತಾ ಇದ್ದರೆ ರೈತರ ಪಾಡು ಏನಾಗಬಾರದು ಎಂದು ಪ್ರಶ್ನಿಸಿದರು.

ಹೀಗಾಗಿ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಮುಖಂಡರು ಮನವಿ ಮಾಡಿದೆವು.ಇದಕ್ಕೆ ಸಿಎಂ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಇದಕ್ಕಾಗಿ ನಾವು ಅವರಿಗೆ ವಿಶೇಷ ಅಭಿನಂದನೆ ತಿಳಿಸುವುದಾಗಿ ಹೇಳಿದರು.

ಈ ಹಿಂದೆಯೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವಂತೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಾಖಲಿಸಿದ್ದ ಮೊಕದ್ದಮೆಗಳನ್ನು ಹಿಂಪಡೆದರೆ ಹೊರತು, ರೈತರ ಒಂದೇ ಒಂದು ಪ್ರಕರಣವನ್ನು ಹಿಂಪಡೆಯಲಿಲ್ಲ. ಇದು ರೈತರ ಮೇಲೆ ಸಮ್ಮಿಶ್ರ ಸರ್ಕಾರಕ್ಕೆ ಇದ್ದ ಬದ್ಧತೆ ಎಂದು ವ್ಯಂಗ್ಯವಾಡಿದರು.

ಕೃಷಿ ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಅವರಿಂದಲೇ ರೈತರಿಗೆ ಪ್ರತ್ಯೇಕವಾದ ಬಜೆಟ್ ಮಂಡಿಸುವಂತೆಯೂ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ. ಇದರ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೇಶದಲ್ಲಿ ಕೃಷಿ ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ಎಲ್ಲೂ ನೀಡಿಲ್ಲ. ಅದು ಕರ್ನಾಟಕದಿಂದಲೇ ಆರಂಭವಾಗಲಿ ಎಂದು ಆಗ್ರಹಿಸಿದರು.

ಅತಿವೃಷ್ಟಿಗೆ ಒಳಗಾಗಿರುವ ಸಂತ್ರಸ್ಥರಿಗೆ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರಕಾರ್ಯ ಕೈಗೊಳ್ಳಬೇಕು. ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಡಬೇಕು, ದುರಸ್ತಿಗಾಗಿ ತಾತ್ಕಾಲಿಕ ಪರಿಹಾರ, ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡುವುದು ಸೇರಿದಂತೆ ಸಂತ್ರಸ್ಥರಿಗೆ ಎಲ್ಲಾ ರೀತಿಯ ನೆರವು ನೀಡಬೇಕೆಂದು ಕುರುಬೂರು ಶಾಂತಕುಮಾರ್‍ಒತ್ತಾಯಿಸಿದರು.
ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ ಪರಿಹಾರವನ್ನು ಬಿಡುಗಡೆ ಮಾಡಬೇಕು.ತಾತ್ಕಾಲಿಕವಾಗಿಯಾದರೂ ರಾಜ್ಯಕ್ಕೆ ಹಣಕಾಸಿನ ನೆರವು ಒದಗಿಸಲಿ. ಕರ್ನಾಟಕ ನಾಲ್ಕೂವರೆ ದಶಕಗಳ ನಂತರ ಭೀಕರ ಅತಿವೃಷ್ಟಿಗೆ ಸಿಲುಕಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೆ, ಸಂಕಷ್ಟದಲ್ಲಿರುವ ಸಂತ್ರಸ್ಥರ ನೆರವಿಗೆ ಧಾವಿಸಿ ಕಣ್ಣೀರು ಒರೆಸಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ