
ಬೆಂಗಳೂರು, ಆ.26-ಸುಗಮ ಆಡಳಿತ ಮತ್ತು ಭವಿಷ್ಯದಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ವಿಘ್ನವಾಗಬಾರದೆಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸುವುದು ಬಹುತೇಕ ಅಂತಿಮವಾಗಿದೆ.
ಒಕ್ಕಲಿಗ ಸಮುದಾಯದಿಂದ ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವತ್ನಾರಾಯಣ,ವೀರಶೈವ ಲಿಂಗಾಯತ ಸಮುದಾಯದಿಂದ ಸಚಿವ ಲಕ್ಷ್ಮಣ್ಸವದಿ ಹಾಗೂ ದಲಿತ ಸಮುದಾಯದಿಂದ ಸಚಿವ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಯಾಗುವುದು ಖಾತ್ರಿಯಾಗಿದೆ.
ಪಕ್ಷದಲ್ಲಿ ಕೆಲವರು ಅಸಮಾಧಾನಗೊಂಡಿದ್ದರೂ ವರಿಷ್ಠರ ಸೂಚನೆಯಂತೆ ಈ ಮೂವರಿಗೂ ಡಿಸಿಎಂ ಪಟ್ಟ ನೀಡುವ ಮೂಲಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಪ್ರಾರಂಭದಲ್ಲೇ ಚಿವುಟಿ ಹಾಕಲು ಮುಂದಾಗಿದ್ದಾರೆ.
ಲಕ್ಷ್ಮಣ್ಸವದಿ ಮತ್ತು ಅಶ್ವತ್ನಾರಾಯಣ ಅವರಿಗೆ ಡಿಸಿಎಂ ಪಟ್ಟನೀಡುವ ಬಗ್ಗೆಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದೆ.
ಹಿರಿಯರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅವರನ್ನು ಕಡೆಗಣಿಸಿ ಈ ಇಬ್ಬರಿಗೆ ಡಿಸಿಎಂ ಹುದ್ದೆ ನೀಡುವ ಅಗತ್ಯವಾದರೂ ಏನಿತ್ತು ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಯಾವುದಕ್ಕೂ ಜಗ್ಗದ ಬಿಎಸ್ವೈ ವರಿಷ್ಠರ ಸೂಚನೆಯಂತೆ ಮೂರು ಸಮುದಾಯಗಳಿಗೆ ಡಿಸಿಎಂ ಸ್ಥಾನ ನೀಡಿ ಭಿನ್ನಮತ ಹತ್ತಿಕ್ಕುವ ಜೊತೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಿದ್ದಾರೆ.
ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ್ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಅವರಿಗೆ ಒಂದು ಹೆಜ್ಜೆ ಮುಂದೆ ಹೋಗಿ ಡಿಸಿಎಂ ಸ್ಥಾನ ನೀಡುತ್ತಿರುವುದಕ್ಕೆ ಸಚಿವ ಸ್ಥಾನ ವಂಚಿತರ ಕಣ್ಣು ಕೆಂಪಾಗಿಸಿದೆ.
ಆದರೆ ವರಿಷ್ಠರ ಸೂಚನೆಯನ್ನು ಪಾಲನೆ ಮಾಡಬೇಕಾದ ಅಗತ್ಯವಿರುವುದರಿಂದ ಅಸಮಾಧಾನವನ್ನು ಹೇಳಲು ಆಗದೆ, ಇಟ್ಟುಕೊಳ್ಳಲು ಆಗದೆ ವಿಲವಿಲ ಒದ್ದಾಡುವಂತಾಗಿದೆ.
ಹೈಕಮಾಂಡ್ ಆದೇಶವನ್ನು ಎಲ್ಲರೂ ಚಾಚೂತಪ್ಪದೆ ಪಾಲಿಸಬೇಕು. ನನಗೆ ಇಂಥದ್ದೇ ಖಾತೆ ಬೇಕು, ಇಲ್ಲವೆ ಡಿಸಿಎಂ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ಹೊರಹಾಕಿದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಲು ಮಾನಸಿಕವಾಗಿ ಸಿದ್ಧರಾಗಬೇಕೆಂದು ದೆಹಲಿ ನಾಯಕರು ಖಡಕ್ ಎಚ್ಚರಿಕೆ ರವಾನಿಸಿದ್ದರು. ಇದೀಗ ಯಡಿಯೂರಪ್ಪ ವರಿಷ್ಠರ ಸೂಚನೆಯಂತೆ ಮೂವರಿಗೆ ಡಿಸಿಎಂ ಸ್ಥಾನ ನೀಡಲು ತೀರ್ಮಾನಿಸಿದ್ದಾರೆ. ಸಂಜೆಯೊಳಗೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.