ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

ಹುಬ್ಬಳ್ಳಿ: ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಇಂದು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಸರ್ಕಾರ ಬಹಳ ದಿನ ಇರುತ್ತೆ ಎಂದು ಯಾರಿಗೂ ನಂಬಿಕೆ ಇಲ್ಲ. ರೆಬಲ್ಸ್ ಗಳನ್ನಿಟ್ಟುಕೊಂಡು ಸರ್ಕಾರ ಮುನ್ನೆಡೆಸೋಕ್ಕಾಗುತ್ತಾ. ಹಾಲು ಕುಡಿದ ಮಕ್ಕಳೆ ಬದುಕಲ್ಲ. ಇನ್ನು ವಿಷ ಕುಡಿದವರು ಬದಕ್ತಾರಾ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ದೆಹಲಿ ಟು ಬೆಂಗಳೂರು ಮಧ್ಯೆ ಟೂರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಜನರ ಕಡೆ ನೋಡಬೇಕು ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ದೇವೇಗೌಡರ ಕುಟುಂಬದವರು ಮಾಡಿದ ಆರೋಪದ ಬಗ್ಗೆ ನಾನು ಸುಧೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ ಬಸವರಾಜು ಮತ್ತು ಸೋಮಶೇಖರ್‍ ರನ್ನು ನಾನು ಮುಂಬೈಗೆ ಕಳುಸಿದ್ದೇನೆ ಎಂದು ಅವರು ಹೇಳುತ್ತಾರೆ. ಹಾಗಾದರೆ ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯರನ್ನು ಯಾರು ಕಳುಹಿಸಿದ್ದು, ಅವರು ಜೆಡಿಎಸ್‍ನವರು ಅಲ್ಲವೆ. ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ, ಆ ಬಗ್ಗೆ ನನಗೇನು ಗೊತ್ತಿಲ್ಲ. ಇವತ್ತು ಗುಲಾಮ್ ನಬಿ ಅಜಾದ್ ಬರುತ್ತಾರೆ ಎಂದು ಕೇಳಿದ್ದೇನೆ. ಆದರೆ ನಾನು ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ