ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಲ್ಲಿ ತೀವ್ರ ಹಿನ್ನಡೆ

ನವದೆಹಲಿ: ತಮ್ಮ‌‌ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಬಿಜೆಪಿ‌ ಸರ್ಕಾರ ಬರಲು ಕಾರಣರಾಗಿರುವ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಲ್ಲಿ ಇವತ್ತು ಒಟ್ಟೊಟ್ಟಿಗೆ ಎರಡು ಆಘಾತವಾಗಿದೆ.

ತಮ್ಮನ್ನು ಅನರ್ಹಗೊಳಿಸಿದ್ದ ಸ್ಪೀಕರ್ (ಈಗ ಮಾಜಿ) ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಿಳಂಬವಾಗುತ್ತಿರುವುದರಿಂದ ಈಗಾಗಲೇ ಆತಂಕಗೊಂಡಿರುವ ಅನರ್ಹ ಶಾಸಕರಿಗೆ ಇಂದು ಸುಪ್ರೀಂ ಕೋರ್ಟಿನಲ್ಲಿ ಇವರ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ‘ಮೆನ್ಷನ್ ಮಾಡಲು’ ನಿರಾಕರಿಸಿದ್ದು ಮೊದಲ ಆಘಾತವಾದರೆ, ನಂತರ ಕಿರಿಯ ವಕೀಲರು ‘ತುರ್ತು ವಿಚಾರಣೆ ನಡೆಸಿ’ ಎಂದು ಮಾಡಿಕೊಂಡ ಮನವಿಯನ್ನು ನಿರಾಕರಿಸಿದ್ದು ಎರಡನೇ ಆಘಾತವಾಗಿದೆ.

ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ವಿಳಂಬವಾದರೆ ತಮ್ಮ ರಾಜಕೀಯ ಭವಿಷ್ಯ ಮುಸುಕಾಗಬಹುದು ಎಂದು ಆತಂಕಕ್ಕೊಳಗಾಗಿರುವ ಅನರ್ಹ ಶಾಸಕರು, ‘ಪ್ರಕರಣವನ್ನು ಬೇಗ ಇತ್ಯರ್ಥ ಪಡಿಸಲು ಕಾನೂನು ಹೋರಾಟಕ್ಕೆ ಸಹಕಾರ ಕೊಡಿ’ ಎಂದು ಕಳೆದ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದರು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರಿಂದಲೂ ಭರವಸೆಯ ನಿರೀಕ್ಷೆಯಲ್ಲಿದ್ದರು. ವಕೀಲರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಹೀಗೆ ಒತ್ತಡ ನಿರ್ಮಾಣವಾದ ಹಿನ್ನೆಲೆಯಲ್ಲಿ ಸೋಮವಾರ ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟಿನಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕಡೆ ಕ್ಷಣದಲ್ಲಿ ಮುಕುಲ್ ರೋಹ್ಟಗಿ ಮೆನ್ಷನ್ ಮಾಡಲು ನಿರಾಕರಿಸಿದ್ದಾರೆ.

ಮುಕುಲ್ ರೋಹ್ಟಗಿ ಬದಲಾಗಿ ಅವರ ತಂಡದ ಕಿರಿಯ ವಕೀಲರು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡರು. ಆದರೆ ನ್ಯಾಯಮೂರ್ತಿ ಎನ್.ವಿ. ರಮಣ ತುರ್ತು ವಿಚಾರಣೆಗೆ ನಿರಾಕರಿಸಿದರು. ಈ ಹಿಂದೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಕೂಡ ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು. ಪೀಠವು ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಪರಿಶೀಲನೆ ನಡೆಸಿ ವಿಚಾರಣೆಗೆ ದಿನ ನಿಗದಿ ಪಡಿಸಲಿ ಎಂದು ಆದೇಶಿಸಿತ್ತು. ಇದಾದ ಬಳಿಕ ಅನರ್ಹ ಶಾಸಕರ ಪರ ವಕೀಲರು ಮೌಖಿಕವಾಗಿ ರಿಜಿಸ್ಟ್ರಾರ್ ಬಳಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರುದಾರರು ವಕೀಲರ ಮೇಲೆ ಒತ್ತಡ ಹೇರಲಾರಂಭಿಸಿದರು.

ಅನರ್ಹ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೂಲ ಅರ್ಜಿಯು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದಿದೆ. ಆದರೀಗ ಮುಖ್ಯ ನ್ಯಾಯಮೂರ್ತಿಗಳ ಪೀಠವು ಸಂವಿಧಾನಿಕ ಪೀಠವಾಗಿ ಮಾರ್ಪಟ್ಟು ಮಹತ್ವದ ಬಾಬರಿ ಮಸೀದಿ/ರಾಮ ಮಂದಿರ ವಿವಾದದ ವಿಚಾರಣೆ ನಡೆಸುತ್ತಿರುವುದರಿಂದ ಸುಪ್ರೀಂ ಕೋರ್ಟಿನ ಎರಡನೇ ಹಿರಿಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮೆನ್ಷನ್ ಮಾಡಲಾಗಿತ್ತು. ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವೂ ತುರ್ತು ವಿಚಾರಣೆಗೆ ನಿರಾಕಸಿರುವುದರಿಂದ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರೀಗ ಮತ್ತೊಮ್ಮೆ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆಯೇ ಮನವಿ ಮಾಡಿಕೊಳ್ಳಬೇಕಾಗುತ್ತದೆ. ನಾಳೆ ಮುಕುಲ್ ರೋಹ್ಟಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಮನವಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ