ಮುಖ್ಯಮಂತ್ರಿಗಳಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು, ಆ.25-ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆಗಳನ್ನು ಹಂಚಿಕೆ ಮಾಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಸಂಜೆ ವೇಳೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಮುಖ್ಯಮಂತ್ರಿಯವರು ಕಳುಹಿಸಿ ಕೊಟ್ಟಿರುವ ಪಟ್ಟಿಗೆ ಅಂಕಿತ ಹಾಕಲಿದ್ದಾರೆ. ಸಂಜೆಯೊಳಗೆ ಬಹುತೇಕ ಸಚಿವರ ಖಾತೆಗಳು ಬಹಿರಂಗಗೊಳ್ಳಲಿವೆ.
ಬಿಜೆಪಿ ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿನ್ನೆ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಕಾರಣ ಖಾತೆಗಳ ಹಂಚಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಸಂಜೆ ಜೇಟ್ಲಿಯವರ ಅಂತ್ಯಕ್ರಿಯೆ ಮುಗಿದ ನಂತರ ರಾಜ್ಯಪಾಲರು ಅಧಿಕೃತವಾಗಿ ಸಚಿವರ ಖಾತೆಗಳ ಪಟ್ಟಿಗೆ ಅಂಕಿತ ಹಾಕಲಿದ್ದಾರೆ.
ಅರುಣ್ ಜೇಟ್ಲಿಯವರ ಅಂತ್ಯಕ್ರಿಯೆಗೆ ತೆರಳುವ ಮುನ್ನ ಯಡಿಯೂರಪ್ಪ 17 ಸಚಿವರಿಗೆ ಖಾತೆಗಳ ಜವಾಬ್ದಾರಿ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಬಳಿಕ ಯಡಿಯೂರಪ್ಪ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜೇಟ್ಲಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದರು.
ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಕೂಡ ಸಿಎಂ ಅವರೊಂದಿಗೆ ತೆರಳಿದ್ದಾರೆ.ಕಳೆದ ರಾತ್ರಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಮುನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ಖಾತೆಗಳ ಹಂಚಿಕೆ ತೀವ್ರ ಕಗ್ಗಂಟಾದ ಹಿನ್ನೆಲೆಯಲ್ಲಿ ಕೇಂದ್ರ ವರಿಷ್ಠರ ಸೂಚನೆಯಂತೆ ಸಂತೋಷ್ ಜೊತೆ ಮಾತುಕತೆ ನಡೆಸಿ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದ್ದಾರೆಎಂದು ತಿಳಿದುಬಂದಿದೆ.

ಕೆಲವು ಸಚಿವರು ತಮಗೆ ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದ ಪರಿಣಾಮ ನಿನ್ನೆ ಸಂಜೆಯವರೆಗೂ ಖಾತೆಕ್ಯಾತೆ ಹಾಗೇ ಮುಂದುವರೆದಿದ್ದು, ಯಾವಾಗ ಸಂತೋಷ್ ಯಾವುದೇ ಸಚಿವರು ಖಾತೆಗಳಿಗಾಗಿ ಬಿಗಿಪಟ್ಟು ಹಿಡಿಯಬಾರದು. ಮುಖ್ಯಮಂತ್ರಿಯವರು ವಹಿಸುವ ಖಾತೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು.ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದರೆ ಪಕ್ಷವು ಬೇರೆಯದೇ ರೀತಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಚ್ಚರಿಕೆ ಸಂದೇಶ ರವಾನಿಸಿದರು.ತದನಂತರವೇ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.

ಕುತೂಹಲ:
ನೂತನ ಸಚಿವರಿಗೆ ಯಾವ್ಯಾವ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಗುಟ್ಟು ರಟ್ಟಾಗಿಲ್ಲ. ಎಲ್ಲರೂ ಪ್ರಬಲವಾದ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಯಾರಿಗೆ ಯಾವ ಜವಾಬ್ದಾರಿಯನ್ನು ನೀಡುತ್ತಾರೆ ಎಂಬುದು ಇನ್ನು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಮೂಲಗಳ ಪ್ರಕಾರ ದಲಿತ ಸಮುದಾಯದ ಎಡಗೈ ಬಣಕ್ಕೆ ಸೇರಿರುವ ಗೋವಿಂದ ಕಾರಜೋಳಗೆ ಗೃಹ ಖಾತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಅವರು ಲೋಕೋಪಯೋಗಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ ಕೆ.ಎಸ್.ಈಶ್ವರಪ್ಪ ಅವರಿಗೆ ಗೃಹ ಖಾತೆ ಕೊಡಬೇಕೆಂಬ ಅಭಿಪ್ರಾಯ ಇದೆಯಾದರೂ ಅವರ ಸಡಿಲವಾದ ಮಾತುಗಳು ಇಲಾಖೆಯಲ್ಲಿ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸುತ್ತದೆ ಎಂಬ ಆರೋಪಗಳು ಕೇಳಿಬಂದಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗ್ರಾಮೀಣಾಭಿವೃದ್ಧಿ ಇಲ್ಲವೆ,ಲೋಕೋಪಯೋಗಿ ಖಾತೆ ಕೇಳಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ ಎಂಬುದು ರಾಜ್ಯಪಾಲರ ಅಂಕಿತ ಬಿದ್ದ ನಂತರವೇ ಬಹಿರಂಗಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ