ಟಿ.ಆರ್.ಸ್ವಾಮಿಯವರ ನೇಮಕ ಆದೇಶ ಹಿಂಪಡೆದ ರಾಜ್ಯ ಸರ್ಕಾರ

Varta Mitra News

ಬೆಂಗಳೂರು, ಆ.25- ಭ್ರಷ್ಟಚಾರ ನಿಗ್ರಹ ದಳ(ಎಸಿಬಿ)ದಿಂದ ದಾಳಿಗೊಳಗಾಗಿ ಸೇವೆಯಿಂದ ಅಮಾನತುಗೊಂಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭೀವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಪುನಃ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿ ಅವರನ್ನು ನೇಮಕಗೊಳಿಸಿದ್ದ ಆದೇಶವನ್ನು ರಾಜ್ಯಸರ್ಕಾರ ಹಿಂಪಡೆದಿದೆ.
ಕಳೆದ ವರ್ಷ ಎಸಿಬಿಯಿಂದ ದಾಳಿಗೊಳಗಾಗಿದ್ದ ಕೆಐಎಡಿಬಿಯ ಮುಖ್ಯ ಇಂಜಿನಿಯರ್ ದರ್ಜೆಯ ಟಿ.ಆರ್.ಸ್ವಾಮಿಯವರಿಗೆ ಎರಡು ದಿನಗಳ ಹಿಂದಷ್ಟೇ ಪುನಃ ಅದೇ ಹುದ್ದೆಯನ್ನು ನೀಡಲಾಗಿತ್ತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಿ.ಆರ್.ಸ್ವಾಮಿಯವರನ್ನು ಮರುನೇಮಕ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ಇದೀಗ ಎಚ್ಚೆತ್ತುಕೊಂಡಿರುವ ಬಿಎಸ್‍ವೈ ಸ್ವಾಮಿಯವರ ಮರುನೇಮಕ ಆದೇಶವನ್ನು ತಡೆಹಿಡಿಯುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ವರ್ಷ ಭ್ರಷ್ಟಾಚಾರದ ಆರೋಪದಡಿ ಎಸಿಬಿ ಟಿ.ಆರ್.ಸ್ವಾಮಿ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು.ಅವರ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿತ್ತು. ಈ ವೇಳೆ ಬಾತ್‍ರೂಂನ ಕಿಟಕಿಯಿಂದ ಹಣದ ಬ್ಯಾಗನ್ನು ಹೊರಗೆ ಎಸೆದು ಬಚಾವ್ ಆಗಲು ಸ್ವಾಮಿ ಪ್ರಯತ್ನಿಸಿದ್ದರು.
ಬಳಿಕ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿತ್ತು. ಹಿಂದಿನ ಕಾಂಗ್ರೆಸ್-ಜೆಡಿಎಸ್‍ಸಮ್ಮಿಶ್ರ ಸರ್ಕಾರದಲ್ಲಿ ಟಿ.ಆರ್.ಸ್ವಾಮಿ ಪುನಃ ಅದೇ ಹುದ್ದೆಯನ್ನು ಗಿಟ್ಟಿಸಲು ಲಾಬಿ ನಡೆಸಿದ್ದರು. ಆದರೆ ಅವರಿಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ. ಇದ್ದಕ್ಕಿದ್ದಂತೆ ಸಿಎಂ ಯಡಿಯೂರಪ್ಪ ಟಿ.ಆರ್.ಸ್ವಾಮಿಯವರನ್ನು ಕೆಐಎಡಿಬಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಇಂಜಿನಿಯರ್ ಒಂದು ಮತ್ತು ಎರಡರ ಹುದ್ದೆಯಡಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು, ಆಡಳಿತಾತ್ಮಕ ವಿಷಯದ ಮೇಲುಸ್ತುವಾರಿ ವಹಿಸಲು ಆದೇಶಿಸಿ ಸೂಚನೆ ಕೊಟ್ಟಿದ್ದರು.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಆದೇಶವನ್ನು ಹಿಂಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ