ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅರುಣ್ ಜೇಟ್ಲಿಯವರ ಅಂತ್ಯಕ್ರಿಯೆ

ನವದೆಹಲಿ, ಆ.25-ದೆಹಲಿಯಲ್ಲಿ ನಿನ್ನೆ ನಿಧನರಾದ ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಪ್ರಭಾವಿ ಧುರೀಣ ಅರುಣ್ ಜೇಟ್ಲಿ(66) ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜಧಾನಿಯಲ್ಲಿ ನೆರವೇರಿತು.
ಅನೇಕ ಗಣ್ಯಾತಿಗಣ್ಯರು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಮತ್ತು ಬಿಜೆಪಿಯ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ದೆಹಲಿಯ ನಿಗಮ್‍ಬೋಧ್ ಚಿತಾಗಾರದಲ್ಲಿ ಜೇಟ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ 12.07ರಲ್ಲಿ ಅನಾರೋಗ್ಯದಿಂದ ನಿಧನರಾದ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ನಿನ್ನೆ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅನೇಕ ಗಣ್ಯಾತಿಗಣ್ಯರು ಮತ್ತು ಅಪಾರ ಬಂಧು-ಮಿತ್ರರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯನಾಯ್ಡು, ಬಿಜೆಪಿ ಅಧ್ಯಕ್ಷರೂ ಆದ ಗೃಹ ಸಚಿವ ರಾಜನಾಥ್ ಸಿಂಗ್, ಅಮಿತ್ ಷಾ, ಕೇಂದ್ರದ ಸಚಿವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿವಿಧ ಪಕ್ಷಗಳ ನಾಯಕರು ನಿನ್ನೆ ಜೇಟ್ಲಿ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಇಂದು ಬೆಳಗ್ಗೆ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ದೆಹಲಿ ದೀನ್ ದಯಾಳ್ ಉಪಾಧ್ಯಾಯ ಮಾರ್ಗ್‍ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಮೆರವಣಿಗೆಯಲ್ಲಿ ಕರೆತಂದು ಅಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ದರ್ಶನಕ್ಕೆ ಇಡಲಾಯಿತು.
ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಅಪಾರ ಸಂಖ್ಯೆ ಕಾರ್ಯಕರ್ತರು ಸರತಿ ಸಾಲಿನಲ್ಲಿ ನಿಂತು ಜೇಟಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ನಂvರ ಹೂವಿನಿಂದ ಅಲಂಕರಿಸಲಾಗಿದ್ದ ವಾಹನದಲ್ಲಿ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಯಮುನಾ ನದಿ ತಟದಲ್ಲಿರುವ ನಿಗಮ್‍ಭೋದ್ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ವiಧ್ಯಾಹ್ನ 2.30ರಲ್ಲಿ ಆರಂಭವಾದ ವಿಧಿ ವಿಧಾನಗಳ ನಂತರ ಕೇಂದ್ರ ಮಾಜಿ ಸಚಿವರ ಪಾರ್ಥಿವ ಶರೀರವನ್ನು ಚಿತೆಗೆ ಸಮರ್ಪಿಸಲಾಯಿತು. ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಅರುಣ್ ಜೇಟ್ಲಿ ಅವರು ಪಂಚಭೂತಗಳಲ್ಲಿ ಲೀನರಾದರು.
ಅನೇಕ ಗಣ್ಯಾತಿಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಜೇಟ್ಲಿ ಅವರಿಗೆ ಅಂತಿಮ ವಿದಾಯ ವಂದನೆ ಸಲ್ಲಿಸಿದರು.
ಕೆಲ ದಿನಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೇಟ್ಲಿ ನಿನ್ನೆ ಮಧ್ಯಾಹ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಮೂತ್ರಪಿಂಡ ವೈಫಲ್ಯದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕಲವು ತಿಂಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದ ಅವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಜೊತೆಗೆ ಅವರಿಗೆ ಕ್ಯಾನ್ಸರ್ ಸಮಸ್ಯೆಯೂ ಉಲ್ಬಣಿಸಿತ್ತು. ಕಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಮತ್ತು ನಿತ್ರಾಣದಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ವಿಷಮ ಹಂತ ತಲುಪಿತ್ತು. ಚಿಕಿತ್ಸೆ :ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು.
ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಸಚಿವರು ಸೇರಿದಂತೆ ಅನೇಕರ ಗಣ್ಯಾತಿಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.
ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ ಸೇರಿದಂತೆ ಕೇಂದ್ರ ಸಂಪುಟದ ಸದಸ್ಯರು, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂದಿ, ಗುಲಾಂ ನಬಿ ಅಜಾದ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅನೇಕ ರಾಜಕೀಯ ಪಕ್ಷಗಳ ನಾಯಕರು, ಹಲವಾರು ಕ್ಷೇತ್ರಗಳ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಅನೇಕ ಗಣ್ಯಾತಿಗಣ್ಯರೂ ಸಹ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗುಣಗಾನ ಮಾಡಿದ್ಧಾರೆ.
ಬಿಜೆಪಿಯ ಅತ್ಯಂತ ವರ್ಚಸ್ಸಿನ ನಾಯಕರಲ್ಲಿ ಒಬ್ಬರಾಗಿದ್ದ ಅರುಣ್ ಜೇಟ್ಲಿ 2014 ರಿಂದ 2019ರವರೆಗೆ ಹಣಕಾಸು ಮತ್ತು ಕಾಪೆರ್Çರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅವರು ರಕ್ಷಣಾ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆಯಲ್ಲಿ ಕೇಂದ್ರ ಸಚಿವರಾಗಿ ಕೆಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. 2009ರಿಂದ 2014ರವರೆಗೆ ಅವರು ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ