ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೊಸ ಜನಾಂದೋಲನ-ಪ್ರಧಾನಿ ಮೋದಿ

ನವದೆಹಲಿ, ಆ. 25- ಏಕ ಬಳಕೆ (ಒಂದು ಬಾರಿ ಬಳಸಿ ಎಸೆಯುವ) ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಂಗಲ್ ಯೂಸ್ ಪ್ಲಾಸ್ಟಿಕ್ ವಿರುದ್ಧ ಆಕ್ಟೋಬರ್ 2ರ ಗಾಂಧಿ ಜಯಂತಿ ದಿನದಿಂದ ಹೊಸ ಜನಾಂದೋಲನ ರೂಪಿಸುವುದಾಗಿ ಪ್ರಧಾನಿ ಪ್ರಕಟಿಸಿದ್ದಾರೆ.
ಅಪಾರ ಜನಪ್ರಿಯತೆ ಪಡೆದಿರುವ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಮೋದಿ ಮಾರಕ ಪ್ಲಾಸ್ಟಿಕ್‍ನಿಂದ ಪರಿಸರ ಅವನತಿಯತ್ತ ಸಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.
ಆಕ್ಟೋಬರ್ 2 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮಜಯಂತಿ ಈ ಸಂದರ್ಭದಲ್ಲಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೊಸ ಜನಾಂದೋಲನ ರೂಪಿಸುವುದಾಗಿ ಮೋದಿ ಘೋಷಿಸಿದರು.
ಪರಿಸರ ಮತ್ತು ಪ್ರಕೃತಿಗೆ ಮಾರಕವಾದ ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೊಸ ಜನಾಂದೋಲನಕ್ಕೆ ದೇಶವಾಸಿಗಳು ಬೆಂಬಲ ನೀಡಬೇಕು. ಇಂತಹ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಪ್ರಧಾನಿ ಸಲಹೆ ಮಾಡಿದರು.
ಅಂಗಡಿ-ಮುಂಗಟ್ಟುಗಳ ಮಾಲೀಕರು ತಾವು ಮಾರಾಟ ಮಾಡುವ ವಸ್ತುಗಳಿಗೆ ಕಳಪೆ ಪ್ಲಾಸ್ಟಿಕ್‍ಗಳ ಬದಲಾಗಿ ಪರಿಸರಸ್ನೇಹಿ ಚೀಲಗಳನ್ನು ನೀಡಬೇಕು ಎಂದು ಮೋದಿ ಹೇಳಿದರು.
73ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲೂ ಐತಿಹಾಸಿಕ ಕೆಂಪು ಕೋಟೆಯಲ್ಲಿ ಮಾತನಾಡಿದ್ದ ಮೋದಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದ್ದರು. ಅಲ್ಲದೆ ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೋರಾಡದಲ್ಲಿ ಕೈಜೋಡಿಸುವಂತೆ ದೇಶದ ಜನತೆ ಸಲಹೆ ಮಾಡಿದ್ದರು.
ಆಕ್ಟೋಬರ್ -2ರಂದು ಪ್ರಧಾನಿಯವರು ಏಕ ಬಳಕೆ ಪ್ಲಾಸ್ಟಿಕ್ ನಿರ್ಬಂಧ ಕುರಿತು ಹೊಸ ಅಭಿಯಾನ ಘೋಷಣೆಯೊಂದಿಗೆ ಅದರ ವಿರುದ್ಧ ಹೋರಾಡದ ರೂಪು-ರೇಷೆಗಳನ್ನು ಪ್ರಕಟಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ