ಬೆಂಗಳೂರು, ಆ.23-ರಾಜಕೀಯವಾಗಿ ಜೆಡಿಎಸ್-ಕಾಂಗ್ರೆಸ್ಮೈತ್ರಿ ಮುಂದುವರೆಯಬೇಕೇ ಬೇಡವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಇದರಲ್ಲಿ ವೈಯಕ್ತಿಕ ಅಭಿಪ್ರಾಯಗಳು ಮುಖ್ಯ ಅಲ್ಲ. ಪಕ್ಷ ಕೇಳಿದರೆ ನಮ್ಮ ಸಲಹೆಗಳನ್ನು ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬೇಡ. ಪರಸ್ಪರ ಹೊಂದಾಣಿಕೆಯಲ್ಲಿ ಸ್ಪರ್ಧೆ ಮಾಡೋಣ ಎಂದು ಸಲಹೆ ನೀಡಿದ್ದು ನಿಜ. ಆದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿತ್ತು. ನಂತರ ಬಂದ ಫಲಿತಾಂಶದ ಬಗ್ಗೆ ಚರ್ಚೆ ಅಪ್ರಸ್ತುತ ಎಂದರು.
ನನಗೆ ಕುಮಾರಸ್ವಾಮಿ, ದೇವೇಗೌಡರು, ಯಡಿಯೂರಪ್ಪ ಎಲ್ಲರ ಬಗ್ಗೆ ಪ್ರೀತಿ, ಗೌರವಗಳಿವೆ. ಆದರೆ ರಾಜಕೀಯವಾಗಿ ಸಿದ್ಧಾಂತಗಳು ಬೇರೆ ಬೇರೆಯಾಗಿವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರಿಗೆ ನಾನು ಪೋನ್ ಮಾಡಿರಲಿಲ್ಲ. ಅವರಾಗಿಯೇ ಪೋನ್ ಮಾಡಿದ್ದರು. ನನ್ನ ಕಣ್ಣಿನ ಆಪರೇಷನ್ ಬಗ್ಗೆ ವಿಚಾರಿಸಿದರು. ಆರೋಗ್ಯದ ವಿಚಾರ ಹೊರತು ಪಡಿಸಿ ಬೇರೆ ಯಾವ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ನಾನು ಹೇಳಿದ್ದಕ್ಕಾಗಿ ಪೋನ್ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಶುದ್ಧ ಸುಳ್ಳು. ನಾನು ಅವರೊಂದಿಗೆ ಮಾತನಾಡಿಯೇ ಇಲ್ಲ. ಕಳೆದ ಪ್ರತಿಕಾಗೋಷ್ಠಿಯಲ್ಲಿ ಪ್ರಶ್ನೆಗಳು ಬಂದಾಗ ತಪ್ಪು ನಡೆದಿದ್ದರೆ ಸೂಕ್ತ ತನಿಖೆಯಾಗಲಿ ಎಂದಿದ್ದು ನಿಜ.
ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಬಂದ ನಂತರ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ದೇವೇಗೌಡರು, ಅಮಿತ್ ಷಾ ಅಥವಾ ಮೋದಿಯವರು ಸಿಬಿಐ ತನಿಖೆಗೆ ಸೂಚನೆ ನೀಡಲಿರಿಕ್ಕಿಲ್ಲ ಎಂದು ದೇವೇಗೌಡರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಡಿಯೂರಪ್ಪ ಅವರು ತಮ್ಮ ನಾಯಕರನ್ನು ಕೇಳದೆ ನಿರ್ಧಾರ ತೆಗೆದುಕೊಂಡರೇ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈಜೋಡಿಸದೆ ಇದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇ ಬರುತ್ತಿರಲಿಲ್ಲ. ಹಾಗಾಗಿ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ಗಾಂಧಿ ಜೆಡಿಎಸ್ನ್ನು ಬಿಜೆಪಿಯ ಬಿ ಟೀಂ ಎಂದು ಟೀಕೆ ಮಾಡಿದ್ದರು. ಅದು ನಿಜ ಕೂಡ. ದೇವೇಗೌಡರು ಅವರ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಬೆಳೆಸುವುದಿಲ್ಲ.
ಅವರ ಜಾತಿಯವರನ್ನು ಬೆಳೆಸುವುದಿಲ್ಲ. ವೈ.ಕೆ.ರಾಮಯ್ಯ, ಭೈರೇಗೌಡ, ನಾಗೇಗೌಡ ಅವರ ಪರಿಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರ ಆಡಳಿತದಿಂದಾಗಿ ಕಾಂಗ್ರೆಸ್ ಸ್ಥಾನಗಳು ಕುಸಿದಿವೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಆದರೆ 59 ಸ್ಥಾನಗಳಿದ್ದ ಜೆಡಿಎಸ್ 27ಕ್ಕೆ ಕುಸಿಯಲು ಯಾರು ಕಾರಣ ಎಂದು ತಿರುಗೇಟು ನೀಡಿದರು.
ನನ್ನನ್ನು ಒಕ್ಕಲಿಗರ ವಿರೋಧಿ, ಲಿಂಗಾಯತರ ವಿರೋಧಿ ಎಂದು ಬಿಂಬಿಸಿ ಅಪಪ್ರಚಾರ ಮಾಡಿದರು. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಜಾತ್ಯತೀತ ಶಕ್ತಿಗಳು ಒಟ್ಟಾಗಿ ಕೋಮುವಾದಿ ಬಿಜೆಪಿ ವಿರುದ್ಧ ಹೋರಾಟ ಮಾಡುವುದು ನನ್ನ ನಿಲುವು. ಆದರೆ ಈ ಸಂದರ್ಭದಲ್ಲಿ ದೇವೇಗೌಡರ ಆರೋಪಗಳು ಸರಿಯಲ್ಲ ಎಂದರು.
ನನ್ನನ್ನು ಟೀಕೆ ಮಾಡಿದ ವಿಶ್ವನಾಥ್ ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದೆ ಬಹಳಷ್ಟು ಶಾಸಕರು ಅತೃಪ್ತರಿದ್ದಾರೆ. ಯಡಿಯೂರಪ್ಪ ಎಷ್ಟು ದಿನ ಅಧಿಕಾರದಲ್ಲಿರುತ್ತದೋ ಎಂದು ಗೊತ್ತಿಲ್ಲ ಎಂದು ಹೇಳಿದರು.