ಬಿಜೆಪಿಯ ನಡವಳಿಕೆ ಬಗ್ಗೆ ಅನರ್ಹ ಶಾಸಕರು ತೀವ್ರ ಅಸಮಾಧಾನ

ಬೆಂಗಳೂರು, ಆ.23-ನೂತನ ಸರಕಾರದಲ್ಲಿನ ಸಚಿವ ಸಂಪುಟ ವಿಸ್ತರಣೆ ಗೊಂದಲ, ಖಾತೆ ಹಂಚಿಕೆ ಬೇಸರ ಸೇರಿದಂತೆ ಹಲವಾರು ವಿಷಯಗಳೂ ಸೇರಿದಂತೆ ಬಿಜೆಪಿಯ ನಡವಳಿಕೆ ಬಗ್ಗೆ ಅನರ್ಹ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಅನರ್ಹ ಶಾಸಕರು ದೆಹಲಿಗೆ ತೆರಳಿ ಅಲ್ಲೆ ಬೀಡು ಬಿಟ್ಟಿದ್ದಾರೆ. ಮೈತ್ರಿ ಸರ್ಕಾರ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆ ಅನರ್ಹ ಶಾಸಕರಲ್ಲಿ ಮೂಡಿದೆ.

ದೆಹಲಿಯಲ್ಲಿ ಸಭೆ ಸೇರಿ ಚರ್ಚಿಸಿದ ಅನರ್ಹ ಶಾಸಕರಾದ ಹೆಚ್ ವಿಶ್ವನಾಥï, ಎಸ್ ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಭೆರತಿ ಬಸವರಾಜï, ಮಹೇಶ್ ಕುಮಟಳ್ಳಿ ಹಾಗು ಇತರರು ತಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಸರಕಾರದಲ್ಲಿ ಕೆಲವು ಪ್ರಮುಖ ನಿರ್ಧಾರ ತಗೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಕಾಂಗ್ರೆಸ್ – ಜೆಡಿಎಸ್ ತೊರೆದು, ಶಾಸಕ ಸ್ಥಾನವನ್ನೂ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟ ತಮ್ಮೊಂದಿಗೆ ಯಾವುದೇ ಪ್ರಮುಖ ಸಂಗತಿ ಚರ್ಚೆ ಮಾಡದಿರುವ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ವಿಳಂಬ ವಾಗುತ್ತಿರುವ ಬಗ್ಗೆಯೂ ಅನರ್ಹ ಶಾಸಕರು ಬೇಸರ ಪಟ್ಟುಕೊಂಡಿದ್ದಾರೆ. ಈ ಬಗ್ಗೆ ಹಿರಿಯ ವಕೀಲರ ಜತೆ ಸಮಾಲೋಚನೆ ನಡೆಸಿ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆಗೆ ಬಿಜೆಪಿ ಆಸಕ್ತಿ ತೋರದಿರುವ ಬಗ್ಗೆಯೂ ನೋವು ಹಂಚಿಕೊಂಡಿದ್ದಾರೆನ್ನಲಾಗಿದೆ.

ಪಾರಿವಾಳಗಳ ಪಂಜರಕ್ಕೆ ಬೆಕ್ಕು ಬಿಟ್ಟಂತೆ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿದ್ದೀರಿ. ನಮಗೆ ಕೊಟ್ಟ ಭರವಸೆಯನ್ನು ಮೊದಲು ಉಳಿಸಿಕೊಳ್ಳಿ. ನಮಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿ ಎಂದು ಸಿಎಂ ಬಿಎಸ್‍ವೈ ಎದುರು ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಲಕ್ಷ್ಮಣ್ ಸವದಿ ಶಾಸಕರೂ ಆಗಿಲ್ಲ, ಪರಿಷತ್ ಸದಸ್ಯರೂ ಆಗಿಲ್ಲ. ಆದರೂ ಮಂತ್ರಿ ಸ್ಥಾನ ಹೇಗೆ ಕೊಟ್ಟಿದ್ದೀರಿ ಎಂದು ಸಿಎಂ ಬಿಎಸ್‍ವೈ ಅವರಿಗೆ ಪ್ರಶ್ನೆ ಮಾಡಿದ್ದು, ಅವರಿಗೆ ಅವಕಾಶ ಕೊಡಬಾರದು ಎಂದು ಒತ್ತಡವನ್ನು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಯಡಿಯೂರಪ್ಪ ಅವರ ಸರ್ಕಾರದಲ್ಲಿ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಇನ್ನೂ ಅಧಿಕೃತವಾಗಿ ಯಾರಿಗೂ ಖಾತೆ ಹಂಚಿಕೆಯಾಗಿಲ್ಲ.

ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಸೂತ್ರಧಾರಿಯಾಗಿ ಕೆಲಸ ಮಾಡಿ ಕೊನೆಗೂ ದೋಸ್ತಿ ಸರ್ಕಾರವನ್ನು ಬೀಳಿಸುವಲ್ಲಿ ಸಫಲರಾಗಿದ್ದರು. ನಂತರ ತಮಗೆ ಮಂತ್ರಿಗಿರಿ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಇದರ ನಡುವೆ ಬಿಜೆಪಿ ಸರ್ಕಾರದಲ್ಲಿ ಜಾರಕಿಹೊಳಿ ಕುಟುಂಬದವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಇದರಿಂದ ರಮೇಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ