ಪ್ಯಾರಿಸ್, ಆ.23- ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ಸಂಧಾನಕ್ಕೆ ಸಿದ್ಧ ಎಂದು ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಿರುವ ಡೋನಾಲ್ಡ್ ಟ್ರಂಪ್ ಅವರಿಗೆ ಫ್ರಾನ್ಸ್ ರಾಷ್ಟ್ರಾಧ್ಯಕ್ಷರು ಪರೋಕ್ಷ ತಿರುಗೇಟು ನೀಡಿದ್ದಾರೆ.
ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಇಲ್ಲಿ ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆ ಅನಪೇಕ್ಷಿತ ಎಂದು ಹೇಳುವ ಮೂಲಕ ಮಧ್ಯಸ್ಥಿಕೆ ವಹಿಸುವ ಇಂಗಿತ ವ್ಯಕ್ತಪಡಿಸಿದ್ದ ಟ್ರಂಪ್ಗೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಟಾಂಗ್ ನೀಡಿದ್ದಾರೆ.
ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲï ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ್ದಾರೆ. ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನಿನ್ನೆ ಪ್ಯಾರಿಸ್ಗೆ ಆಗಮಿಸಿದರು.
ಈ ವೇಳೆ ಜಂಟಿ ಹೇಳಿಕೆ ಸಂದರ್ಭದಲ್ಲಿ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ ಮ್ಯಾಕ್ರನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಿದೆವು. ನನ್ನ ಅಭಿಪ್ರಾಯದಂತೆ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಇಲ್ಲಿ ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆ ಅನಪೇಕ್ಷಿತ.
ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದಾಗಿ ಕಣಿವೆ ರಾಜ್ಯದಲ್ಲಿ ಅಶಾಂತಿ ತಲೆದೋರಬಹುದು. ಆದರೆ ಶಾಂತಿ ಮುಂದುವರಿಕೆ ಇಲ್ಲಿ ಮುಖ್ಯ. ಅಂತೆಯೇ ಸ್ಥಳೀಯರ ಹಕ್ಕುಗಳ ರಕ್ಷಣೆ ಕೂಡ ಮುಖ್ಯ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೂ ನಾನು ಮಾತನಾಡಿದ್ದು, ದ್ವಿಪಕ್ಷೀಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದೇನೆ ಎಂದು ಮ್ಯಾಕ್ರನ್ ಹೇಳಿದರು.