ಡಿಜೆಗೆ ಅವಕಾಶ ನೀಡಲು ಅಮರೇಶ್ ಕರಡಿ ಒತ್ತಾಯ ಮುಖ್ಯಮಂತ್ರಿ ಅವರಿಗೆ ಮನವಿ; ನಿರ್ಬಂಧ ತೆರವಿಗೆ ಸೂಚಿಸಲು ಆಗ್ರಹ

ಕೊಪ್ಪಳ ಆ 23: ನಾಡಿನಾದ್ಯಂತ ಸೆಪ್ಟಂಬರ್ 2ನೇ ತಾರಿಖಿನಿಂದ ಆರಂಭವಾಗುವ ಶ್ರೀ ಗಣೇಶ ಚತುರ್ಥಿ ಅಂಗವಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಹಾಗೂ ವಿಸರ್ಜಿಸುವ ಸಂದರ್ಭದಲ್ಲಿ ಡಿಜೆ ಸೌಂಡ್‌ಸಿಸ್ಟಮ್ ಬಳಸಿ ಮೆರವಣಿಗೆ ಮಾಡಲು ಅವಕಾಶ ನೀಡಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಸಮಿತಿ ಸಂಚಾಲಕ ಅಮರೇಶ್ ಕರಡಿ ಅವರು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಪರ ಒತ್ತಾಯಿಸಿದ್ದಾರೆ.

ಈ ಕುರಿತು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅಮರೇಶ್ ಕರಡಿ, ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್ ಅವರು ಆರಂಭಿಸಿ ಹೋರಾಟಕ್ಕೆ ಜನರನ್ನು ಹುರಿದುಂಬಿಸಿದ್ದರು. ಅಂದಿನಿಂದ ಇಂದಿನವರೆಗೂ ಗಣೇಶ ಉತ್ಸವವನ್ನು ನಾಡಿನಾದ್ಯಂತ ಸಾಂಸ್ಕೃತಿಕವಾಗಿ ಆಚರಿಸಲಾಗುತ್ತಿದೆ. ವಿಷಯ ಹೀಗಿರುವಾಗ ಮೂರ್ತಿ ಪ್ರತಿಷ್ಠಾಪನೆ ವೇಳೆ ನಡೆಯುವ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಡಿಜೆ ಸೌಂಡ್ ಸಿಸ್ಟಮ್ ಬಳಸುತ್ತಾರೆ. ಆದರೆ ಕಳೆದ ಹಲವು ವರ್ಷಗಳಿಂದ ಡಿಜೆ ಸೌಂಡ್ ಸಿಸ್ಟಮ್ ಬಳಕೆಗೆ ನಿರ್ಬಂಧ ಹೇರಿದ ಜಿಲ್ಲಾಡಳಿತಗಳು ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಿಗೆ ವಿನಾ ಕಾರಣ ತೊಂದರೆ ನೀಡಿ ಕೇಸ್‌ಗಳನ್ನು ಸಹ ದಾಖಲಿಸಿದ ಉದಾಹರಣೆಗಳು ಇವೆ.


ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿಜೆ ರದ್ದು ಮಾಡಲಾಗಿತ್ತು. ಇದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಯ ಒಂದು ಭಾಗವಾಗಿದ್ದ ಡಿಜೆ ಸೌಂಡ್ ಸಿಸ್ಟಮ್ ಬಳಕೆಗೆ ಅಡ್ಡಿಪಡಿಸಲಾಗಿತ್ತು. ಗಣೇಶ ಹಬ್ಬ ಎಲ್ಲರಿಗೂ ಅವಶ್ಯಕವಿರುವ ಹಬ್ಬವಾಗಿದೆ. ಅದರಲ್ಲೂ ಯುವಜನತೆ ಆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಾರ್ವಜನಿಕ ಹಬ್ಬವಾದ ಇದಕ್ಕೆ ಯಾವುದೇ ಅಡ್ಡಿ, ಅಡೆತಡೆಗಳು ಬಾರದಂತೆ ಸರ್ಕಾರ ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದ ಡಿಜೆ ಬಳಕೆ ಹಾಗೂ ವಿಸರ್ಜನೆ ವೇಳೆ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣ ಸೂಚಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

ಇದಲ್ಲದೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡಲು ಜೆಸ್ಕಾಂಗಳು, ಸ್ಥಳೀಯಾಡಳಿತಗಳು, ಪೊಲೀಸ್ ಇಲಾಖೆಯವರು ವಿನಾ ಕಾರಣ ಅನಗತ್ಯ ದಾಖಲೆಗಳನ್ನು ಒದಗಿಸುವಂತೆ ತಿಳಿಸಿ ಮೂರ್ತಿ ಪ್ರತಿಷ್ಠಾಪನೆಗೆ ಕಿರುಕುಳ ನೀಡುತ್ತಾರೆ. ಹೀಗಾಗಿ ಈ ಎಲ್ಲಾ ನಿಯಮಗಳನ್ನು ಸಡಿಲಗೊಳಿಸಿ, ಪ್ರತಿಷ್ಠಾಪನೆಗೆ ನಿಯಮ ಸರಳಿಕರಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ನವೀನ್‌ಕುಮಾರ್ ಗುಳಗಣ್ಣವರ ಉಪಸ್ಥಿತರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ