ಚೆನ್ನೈ: ಲಷ್ಕರ್-ಇ-ತೊಯ್ಬಾ ಸಂಘಟನೆಗೆ ಸೇರಿದ ಆರು ಉಗ್ರರ ತಂಡವೊಂದು ತಮಿಳುನಾಡಿಗೆ ಒಳನುಸುಳಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಾದ್ಯಂತ ನಿನ್ನೆ ಮಧ್ಯರಾತ್ರಿಯಿಂದಲೇ ಹೈ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು ಪೊಲೀಸರು ಮುನ್ನೆಚಚರಿಕೆ ಕ್ರಮವಾಗಿ ಈಗಾಗಲೇ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಶ್ರೀಲಂಕಾದಿಂದ ಸಮುದ್ರ ಮೂಲಕ ಉಗ್ರರು ತಮಿಳುನಾಡು ಪ್ರವೇಶ ಮಾಡಿದ್ದಾರೆ. ಈ ಆರು ಮಂದಿಯಲ್ಲಿ ಒಬ್ಬಾತ ಪಾಕಿಸ್ತಾನೀ ಪ್ರಜೆಯಾಗಿದ್ಧಾನೆ. ಉಳಿದ ಐವರು ಶ್ರೀಲಂಕಾ ತಮಿಳು ಭಾಷಿಕ ಮುಸ್ಲಿಮರಾಗಿದ್ದಾರೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಹಾಗೆಯೇ ಪಾಕಿಸ್ತಾನೀ ಪ್ರಜೆಯನ್ನು ಇಲಿಯಾಸ್ ಅನ್ವರ್ ಎಂದಿರುವುದು ಗೊತ್ತಾಗಿದೆ. ಈತನ ಬಗ್ಗೆ ಮಾಹಿತಿಯನ್ನು ತಮಿಳುನಾಡಿನ ಎಲ್ಲಾ ಪೊಲೀಸ್ ಆಯುಕ್ತ ಮತ್ತು ಪೊಲೀಸ್ ನಿರೀಕ್ಷಕರಿಗೆ ರವಾನಿಸಲಾಗಿದೆಯಂತೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಉಗ್ರಗಾಮಿಗಳು ತಲೆಗೆ ತಿಲಕ ಮತ್ತು ವಿಭೂತಿ ಹಾಕಿ ಹಿಂದೂ ಧಾರ್ಮಿಕರಂತೆ ವೇಷಭೂಷಣ ಹೊಂದಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ತಮಿಳುನಾಡಿನ ಏರ್ಪೋರ್ಟ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಪೂಜಾ ಮಂದಿರ ಸೇರಿದಂತೆ ಹಲವು ಸ್ಥಳಗಳಲ್ಲಿ ತಮಿಳುನಾಡು ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲೂ ಇನ್ನಷ್ಟು ಉಗ್ರರ ಪ್ರವೇಶವಾಗುವ ಸಾಧ್ಯತೆ ಇರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಮಿಳುನಾಡು ಪೊಲೀಸ್ ಮೂಲಗಳು ತಿಳಿಸಿವೆ.