ಬೆಂಗಳೂರು, ಆ.22- ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಸ್ಪರ ಮಾತನಾಡಿಕೊಂಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಮತ್ತು ಉಮೇಶ್ ಕತ್ತಿ ಅವರು ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ವೈಯಕ್ತಿವಾಗಿ ಉತ್ತಮ ಸ್ನೇಹಿತರಾಗಿದ್ದಾರೆ. ಈ ಹಿಂದೆ ಇಬ್ಬರು ಒಂದೇ ಪಕ್ಷದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಇಬ್ಬರ ನಡುವೆ ಬಾಂಧವ್ಯ ಇದೆ.
ಇತ್ತೀಚಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉಮೇಶ್ ಕತ್ತಿ ಸಹೋದರನಿಗೆ ಚುನಾವಣೆಯ ಟಿಕೆಟ್ ನಿರಾಕರಿಸಿತ್ತು. ಆ ಸಂದರ್ಭದಲ್ಲೇ ಉಮೇಶ್ ಕತ್ತಿ ಅಸಮಾಧಾನಗೊಂಡು ಬಂಡಾಯದ ಬಾವುಟ ಹಿಡಿದಿದ್ದರು ಖುದ್ದಾಗಿ ಆಗ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈಗ ಸಚಿವ ಸ್ಥಾನ ಸಿಗದೆ ಕತ್ತಿ ಮುನಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ ಮಾತನಾಡಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿನ್ನೆಯಷ್ಟೆ ಉಮೇಶ್ ಕತ್ತಿ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ಜತೆ ರಹಸ್ಯ ಸಭೆ ನಡೆಸಿದರು. ಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆ ವೇಳೆ ಖುದ್ದು ಭೇಟಿಯಾಗುವ ಇಂಗಿತವನ್ನು ಉಮೇಶ್ ಕತ್ತಿ ವ್ಯಕ್ತಪಡಿಸಿದರು ಎನ್ನಲಾಗಿದೆ.
ಕಣ್ಣಿನ ಸೋಂಕಿನಿಂದಾಗಿ ದೆಹಲಿ ಪ್ರವಾಸವನ್ನು ರದ್ದು ಮಾಡಿ ಬೆಂಗಳೂರಿನಲ್ಲಿ ಉಳಿದು ಕೊಂಡಿರುವ ಸಿದ್ದರಾಮಯ್ಯ ಅವರ ಮನೆ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಕಾಂಗ್ರೆಸ್ನ ಹಲವು ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ನಡುವೆ ಸುದ್ದಿಗಾರರ ಜತೆ ಮಾತನಾಡಿರುವ ಉಮೇಶ್ ಕತ್ತಿ ಅವರು ನಾನು ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಎರಡನೇ ಹಂತದಲ್ಲಿ ಸಿಕ್ಕೆ ಸಿಗುತ್ತದೆ. ಸಚಿವ ಸ್ಥಾನ ಸಿಗದೆ ಇರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನಿನ್ನೆ ನನಗೆ ಪೋನ್ ಮಾಡಿದ್ದರು. ನಾವಿಬ್ಬರೂ 20ವರ್ಷ ಜತೆಯಾಗಿ ಕೆಲಸ ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ.ಸಿದ್ದರಾಮಯ್ಯ ಕಾಂಗ್ರೆಸ್ನಲ್ಲೇ ಇರುತ್ತಾರೆ.ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.