ಶಾಸಕ ಮುನಿರತ್ನ ಬಿಜೆಪಿ ಸೇರ್ಪಡೆ ವಿರೋಧಿಸಿದ ಹಿನ್ನಲೆ-ಬಿಜೆಪಿ ಮುಖಂಡ ಎಂ.ಆರ್.ಕುಮಾರ್ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು, ಆ.22- ಅನರ್ಹ ಶಾಸಕ ಮುನಿರತ್ನ ಬಿಜೆಪಿ ಸೇರ್ಪಡೆ ವಿರೋಧಿಸಿದ್ದಕ್ಕೆ ಜ್ಞಾನಭಾರತಿ ವಾರ್ಡ್ ಬಿಜೆಪಿ ಅಧ್ಯಕ್ಷ ಎಂ.ಆರ್. ಕುಮಾರ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಜ್ಞಾನಭಾರತಿ ವಾರ್ಡ್ ಅಧ್ಯಕ್ಷ ಕುಮಾರ್ ಅವರನ್ನು ಉಚ್ಛಾಟನೆ ಮಾಡಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಎಸ್. ಮುನಿರಾಜು ಸೂಚನೆಯಂತೆ ಉಚ್ಛಾಟನೆ ಮಾಡಲಾಗಿದ್ದು, ಮುನಿರತ್ನ ಬಿಜೆಪಿ ಸೇರ್ಪಡೆ ವಿರೋಧಿಸಿ ಲಕ್ಷ್ಮೀಕಾಂತ ರೆಡ್ಡಿಗೆ ಕುಮಾರ್ ಪತ್ರ ಬರೆದಿದ್ದರು.

ಒಂದು ವೇಳೆ ಪಕ್ಷಕ್ಕೆ ಸೇರಿಸಿಕೊಂಡರೆ ಎಲ್ಲ ಪದಾಧಿಕಾರಿಗಳು ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದೀರಿ. ಆದರೆ, ಮುನಿರತ್ನ ಸೇರ್ಪಡೆ ನಿರ್ಧಾರ ಪಕ್ಷ ತೆಗೆದುಕೊಂಡಿದೆ. ಇದನ್ನು ವಿರೋಧಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ ಹಾಗಾಗಿ ನಿಮ್ಮನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುನಿರತ್ನ ಬಿಜೆಪಿ ಸೇರ್ಪಡೆ ವಿರೋಧಿಸಿ ನಾಯಕರಿಗೆ ಪತ್ರ ಬರೆದಿರುವ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರ ಹೆಚ್ಚಿನ ವಿರೋಧ ಹತ್ತಿಕ್ಕಲು ಕುಮಾರ್ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ