ಡ್ವೈನ್ ಜಾನ್ಸನ್ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ

ವಾಷಿಂಗ್‍ಟನ್/ ಲಾಸ್ ಏಂಜೆಲ್ಸ್, ಆ.22-ವಿಶ್ವವಿಖ್ಯಾತ ನಟನಾಗಿರುವ ಮಾಜಿ ಕುಸ್ತಿಪಟು ಡ್ವೈನ್ ಜಾನ್ಸನ್ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿನಿಮಾವೊಂದಕ್ಕೆ 640 ಕೋಟಿ ರೂ. ಸಂಭಾವನೆ ಪಡೆಯುವ ಈ ದೈತ್ಯದೇಹಿ ಹಾಲಿವುಡ್‍ನ ಅತ್ಯಧಿಕ ಗಳಿಕೆಯ ನಟ ಎಂಬ ಹೆಗ್ಗಳಿಕೆಗೆ ಎರಡನೇ ವರ್ಷವೂ ಪಾತ್ರರಾಗಿದ್ದಾರೆ.

ಗಳಿಕೆಯಲ್ಲಿ ಹಾಲಿವುಡ್ ಸೂಪರ್‍ಸ್ಟಾರ್‍ಗಳನ್ನು ಹಿಂದಿಕ್ಕಿರುವ ಜಾನ್ಸನ್, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ 12 ತಿಂಗಳಿನಲ್ಲಿ ದಿ ರಾಕ್ ಖ್ಯಾತಿ ನಟ 89.3 ದಶಲಕ್ಷ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಪೋಬ್ರ್ಸ್ ನಿಯತಕಾಲಿಕ ಪ್ರಕಟಿಸಿರುವ ಪಟ್ಟಿಯು ದೃಢಪಡಿಸಿದೆ.

ಡ್ವೈನ್ ಜಾನ್ಸನ್ ಅಭಿನಯದ ಫಾಸ್ಟ್ ಅಂಡ್ ಪ್ಯೂರಿಯಸ್‍ನ ಹಬ್ಸ್ ಅಂಡ್ ಶಾ ಸಿನಿಮಾ ಈವರೆಗೆ ವಿಶ್ವಾದ್ಯಂತ 5 ಶತಕೋಟಿ ಡಾಲರ್ ಗಳಿಸಿ ಹಿಂದಿನ ದಾಖಲೆಗಳನ್ನು ಪುಡಿಗಟ್ಟಿದೆ. ಜಾನ್ಸನ್ ಅಭಿನಯದ ಬಹುತೇಕ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಅಜಾನುಬಾಹು ಡ್ವೈನ್ ಈ ಹಿಂದೆ ಕುಸ್ತಿಪಟುವಾಗಿದ್ದಾಗ ಹೆವಿ ವೇಯ್ಟ್ ಎದುರಾಳಿಗಳನ್ನು ಬಗ್ಗುಬಡಿದು ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ಸಿನಿಮಾ ರಂಗಕ್ಕೂ ಪ್ರವೇಶಿಸಿ ಅಲ್ಲಿಯೂ ಸೂಪರ್‍ಸ್ಟಾರ್‍ಗಳನ್ನು ಹಿಂದಿಕ್ಕಿ ಅದ್ಭುತ ನಟ ಎನಿಸಿದ್ದಾರೆ.

1999ರಲ್ಲಿ ಬಿಹ್ಯಾಂಡ್ ದಿ ಮ್ಯಾಟ್ ಎಂಬ ಸಾಕ್ಷ್ಯಾಚಿತ್ರದ ಮೂಲಕ ಫಿಲ್ಮ್ ಲ್ಯಾಂಡ್‍ಗೆ ಎಂಟ್ರಿಯಾದ ಈ ಫೈಟರ್, 2001ರಲ್ಲಿ ಮಮ್ಮಿ ರಿಟನ್ರ್ಸ್ ಸಿನಿಮಾ ಮೂಲಕ ಹಾಲಿವುಡ್ ಪ್ರವೇಶಿಸಿ ಗೆಲುವಿನ ನಾಗಾಲೋಟ ಮುಂದುವರಿಸಿದರು. ಸೂಪರ್‍ಹಿಟ್ ದಿ ಸ್ಕಾರ್ಪಿಯನ್ ಕಿಂಗ್, ವಾಕಿಂಗ್ ಟಾಲ್, ಜರ್ನಿ, ಹರ್ಕಿಲ್ಯೂಸ್, ಫಾಸ್ಟ್ ಅಂಡ್ ಫ್ಯೂರಿಯಸ್, ಫಾಸ್ಟರ್, ಆಂಡ್ರಿಯಾಸ್, ರ್ಯಾಂಪೇಜ್ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್, ಸೈನ್ಸ್ ಫಿಕ್ಷನ್, ಕಾಮಿಡಿ ಎಲ್ಲ ಪಾತ್ರಗಳನ್ನು ನಿಭಾಯಿಸಬಲ್ಲ ಈ ನಟನಿಗೆ ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಅವೆಂಜರ್ಸ್ ಖ್ಯಾತಿಯ ಕ್ರಿಸ್ ಹೆಮ್ಸ್‍ವರ್ಥ್ ಹಾಗೂ ಹಾಲಿವುಡ್‍ನ ಪ್ರಖ್ಯಾತ ನಟರಾದ ಬ್ರಾಡ್ಲೆ ಕೂಪರ್, ರಾಬರ್ಟ್ ಡೌನ್ನೆ ಜ್ಯೂನಿಯರ್ ಮೊದಲಾದವರನ್ನು ಜಾನ್ಸನ್ ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ