ತಮ್ಮ ತಂದೆಯ ಬಂಧನ ಸಂಪೂರ್ಣ ರಾಜಕೀಯ ಪ್ರೇರಿತ-ಸಂಸದ ಕಾರ್ತಿ ಚಿದಂಬರಂ

ನವದೆಹಲಿ, ಆ.22- ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮ ತಂದೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬಂರಂ ಅವರನ್ನು ಸಿಬಿಐ ಬಂಧಿಸಿರುವ ಕ್ರಮವನ್ನು ಸಂಪೂರ್ಣವಾಗಿ ಇದು ರಾಜಕೀಯ ಪ್ರೇರಿತ ಎಂದು ಅವರ ಪುತ್ರ, ಸಂಸದ ಹಾಗೂ ಉದ್ಯಮಿ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.

ಚಿದಂಬರಂ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಕುತಂತ್ರವಿದು. ಇಡೀ ಪ್ರಕರಣ ರಾಜಕೀಯ ಪ್ರೇರಿತ ಎಂದರು.

ಇದೊಂದು ಸಂಪೂರ್ಣವಾಗಿ ರಾಜಕೀಯ ದ್ವೇಷದ ಕುತಂತ್ರ. 2008ರಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಈ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ 2017ರಲ್ಲಿ ತಮ್ಮ ತಂದೆಯ ವಿರುದ್ಧ ಎಫ್‍ಐಆರ್ ದಾಖಲಿಸಿದರು ಎಂದು ಆಪಾದಿಸಿದರು.

ನನ್ನ ಮೇಲೆ ನಾಲ್ಕು ಬಾರಿ ದಾಳಿಯಾಗಿದೆ. 20 ಬಾರಿ ಕೋರ್ಟ್‍ಗೆ ವಿಚಾರಣೆಗೆ ಹಾಜರಾಗಲು ಸಮ್ಮನ್ಸ್ ಜಾರಿ ಮಾಡಲಾಯಿತು, ಸಿಬಿಐಯವರು ಕೂಡ 11 ಸಲ ನನ್ನನ್ನು ಕರೆದುಕೊಂಡು ಹೋಗಿದ್ದರು. ನನ್ನ ಸಹವರ್ತಿಗಳನ್ನು ಸಹ ಕರೆದು ತೀವ್ರ ವಿಚಾರಣೆಗೊಳಪಡಿಸಲಾಯಿತು. ಆದರೆ ಇನ್ನೂ ನಮ್ಮ ಮೇಲೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಕೇಸು ಕೂಡ ಇಲ್ಲ. ನನಗೂ ಐಎನ್‍ಎಕ್ಸ್ ಮೀಡಿಯಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ