ಬೆಂಗಳೂರು,ಆ.21-ಗಜ ಪ್ರಸವದಂತಿದ್ದ ಸಚಿವಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಪ್ರಮುಖ ಖಾತೆಗಳ ಮೇಲೆ ಸಚಿವರು ಕಣ್ಣಿಟ್ಟಿರುವ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.
ಗೃಹ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಕಂದಾಯ, ಸಾರಿಗೆ, ಸಮಾಜಕಲ್ಯಾಣ, ಲೋಕೋಪಯೋಗಿ, ನಗರಾಭಿವೃದ್ಧಿ, ವಸತಿ, ಬೃಹತ್ ಕೈಗಾರಿಕೆ, ಬೃಹತ್ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳಿಗೆ ಆಕಾಂಕ್ಷಿಗಳು ಪಟ್ಟು ಹಿಡಿದಿರುವುದರಿಂದ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.
ಇಂದು ಸಂಜೆಯೊಳಗೆ ಇಲ್ಲವೆ, ನಾಳೆ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಬಿ.ಎಸ್.ವೈ ಕಳುಹಿಸಿಕೊಡುವ ಸಾಧ್ಯತೆ ಇದೆ.
ಕಳೆದ ರಾತ್ರಿಯೇ ರಾಜಭವನಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದ್ದರು.ಆದರೆ ಖಾತೆಯಲ್ಲಿ ಕ್ಯಾತೆ ಉಂಟಾಗಿದ್ದರಿಂದ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಚಿವರಾಗಿ ಅನುಭವ ಹೊಂದಿದ ಹಿರಿಯರು ತಮಗೆ ಸಂಪನ್ಮೂಲ ಭರಿತವಾದ ಖಾತೆಯನ್ನೇ ನೀಡಬೇಕೆಂದು ಬಿಎಸ್‍ವೈ ಮತ್ತು ಸಂಘ ಪರಿವಾರದ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಅನರ್ಹರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕಾಗಿರುವುದರಿಂದ ಪ್ರಮುಖ ಖಾತೆಗಳನ್ನು ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ.
ಈ ಹಿಂದೆ ಗೃಹ ಸಚಿವರಾಗಿದ್ದ ಆರ್.ಅಶೋಕ್ ಈ ಬಾರಿ ತಮಗೆ ಇಂಧನ ಖಾತೆಯನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಯಡಿಯೂರಪ್ಪನವರಿಗೆ ಇದು ಸುತಾರಾಂ ಇಷ್ಟವಿಲ್ಲ. ಅಶೋಕ್ ಈಗಾಗಲೇ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿದ್ದರಿಂದ ಮತ್ತೆ ಅವರಿಗೇ ಗೃಹ ಖಾತೆ ನೀಡಲು ಒಲವು ತೋರಿದ್ದಾರೆ.
ಪೆÇಲೀಸ್ ಇಲಾಖೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಾದರೂ ತಮ್ಮ ಬುಡ ಅಲ್ಲಾಡಿಸುತ್ತದೆ ಎಂಬ ಕಾರಣಕ್ಕಾಗಿ ಅಶೋಕ್ ಗೃಹಖಾತೆ ಸಹವಾಸ ಬೇಡ ಎನ್ನುತ್ತಿದ್ದಾರೆ. ಇಂಧನ ಇಲ್ಲವೆ ಸಾರಿಗೆ ಖಾತೆಯನ್ನು ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಅಚ್ಚರಿ ಬೆಳವಣಿಗೆ ಎಂಬಂತೆ ಸಂಪುಟಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೋಕೋಪಯೋಗಿ, ಇಲ್ಲವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಮೇಲೆ ಕಣಿಟ್ಟಿದ್ದಾರೆ. ಜೊತೆಗೆ ಹಣಕಾಸು ಖಾತೆಯನ್ನೂ ಕೇಳಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪನವರ ಬಳಿ ಈ ಬಾರಿ ಹೆಚ್ಚಿನ ಖಾತೆಗಳು ಉಳಿಯುವುದರಿಂದ ಹಣಕಾಸು ಜವಾಬ್ದಾರಿಯನ್ನು ಶೆಟ್ಟರ್ ಅವರಿಗೆ ನೀಡಿದರೂ ಆಶ್ಚರ್ಯವಿಲ್ಲ.
ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕಾರಣ ಗೋವಿಂದ ಕಾರಜೋಳಗೆ ಈ ಬಾರಿ ಸಂಪುಟದಲ್ಲಿ ಅತ್ಯಂತ ಪ್ರಮುಖವಾದ ಖಾತೆಯೇ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅವರನ್ನೇ ಗೃಹ ಮಂತ್ರಿಯನ್ನಾಗಿ ಮಾಡಬೇಕೆಂಬ ಲೆಕ್ಕಾಚಾರ ಆರ್‍ಎಸ್‍ಎಸ್ ವಲಯದಲ್ಲಿದೆ.
ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇರಿರುವ ಕಾರಜೋಳ ಅವರನ್ನು ಗೃಹ ಮಂತ್ರಿ ಮಾಡಿದರೆ ಬಿಜೆಪಿ ದಲಿತರ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬರಬಹುದು ಎಂಬುದು ಸಂಘ ಪರಿವಾರದ ಲೆಕ್ಕಾಚಾರವಾಗಿದೆ.ಇದಕ್ಕೆ ಬಿಎಸ್‍ವೈ ಕೂಡ ಒಪ್ಪಿಗೆಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಶ್ರೀರಾಮುಲು ತಮಗೆ ಗೃಹ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಬಿಎಸ್‍ವೈ ಅವರಿಗೆ ಸಮಾಜಕಲ್ಯಾಣ ಖಾತೆ ನೀಡುವ ಬಗ್ಗೆ ಒಲವು ಹೊಂದಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದಶಾಸಕ ವಿ.ಸೋಮಣ್ಣ ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ವಸತಿ ಸಚಿವರಾಗಿದ್ದರಿಂದ ತಮಗೆ ಪುನಃ ಅದೇ ಖಾತೆ ನೀಡದೆ ಬೇರೆ ಇಲಾಖೆ ಜವಾಬ್ದಾರಿ ವಹಿಸುವಂತೆ ಕೋರಿದ್ದಾರೆ.
ಇನ್ನು ರಾಜಾಜಿನಗರದ ಸುರೇಶ್‍ಕುಮಾರ್ ಕೂಡ ನಗರಾಭಿವೃದ್ಧಿ ಖಾತೆಗೆ ಒಲವು ತೋರಿದ್ದಾರೆ. ಸಂಘ ಪರಿವಾರದ ಹಿರಿಯರು ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಜೊತೆಗೆ ಕಾನೂನು ಸಂಸದೀಯ ಖಾತೆಯನ್ನೂ ಹೆಚ್ಚುವರಿಯಾಗಿ ನೀಡುವಂತೆ ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.
ಕರಾವಳಿಯಿಂದ ಸಂಪುಟಕ್ಕೆ ಸೇರ್ಪಡೆಯಾಗಿರುವ ಮೇಲ್ಮನೆ ಸದಸ್ಯ ಕೋಟಾಶ್ರೀನಿವಾಸಪೂಜಾರಿಗೆ ಬಂದರು, ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಲಭಿಸಲಿದೆ.
ಮಹಿಳಾ ಖೋಟಾದಡಿ ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವತ್ಥನಾರಾಯಣಗೆ ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಿಗುವ ಸಂಭವವಿದೆ.
ಪಕ್ಷೇತರ ಶಾಸಕ ಮುಳಬಾಗಿಲಿನ ಎಚ್.ನಾಗೇಶ್‍ಗೆ ಸಣ್ಣಕೈಗಾರಿಕೆ, ಔರಾದ್ ಪ್ರಭುಚೌಹಾಣ್‍ಗೆ ಯುವಜನ ಮತ್ತು ಕ್ರೀಡೆ, ಸಿ.ಟಿ.ರವಿಗೆ ಉನ್ನತ ಅಥವಾ ವೈದ್ಯಕೀಯ ಶಿಕ್ಷಣ, ಬಸವರಾಜ ಬೊಮ್ಮಾಯಿಗೆ ಬೃಹತ್ ಕೈಗಾರಿಕೆ ಇಲ್ಲವೆ, ಬೃಹತ್ ನೀರಾವರಿ ಖಾತೆಗಳು ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಜೆ ಅಥವಾ ನಾಳೆಯೊಳಗೆ ನೂತನ ಸಚಿವರಿಗೆ ಬಹುತೇಕ ಖಾತೆಗಳು ಅಧಿಕೃತವಾಗಿ ಹಂಚಿಕೆಯಾಗುವ ಸಂಭವವಿದೆ.
ಸಂಭವನೀಯ ಖಾತೆ
ಜಗದೀಶ್ ಶೆಟ್ಟರ್- ಹಣಕಾಸು/ ಕಂದಾಯ
ಕೆ.ಎಸ್.ಈಶ್ವರಪ್ಪ-ಗೃಹ ಖಾತೆ
ಆರ್.ಅಶೋಕ್-ಸಾರಿಗೆ/ಬೆಂಗಳೂರು ನಗರಾಭಿವೃದ್ಧಿ
ಶ್ರೀರಾಮುಲು-ಸಮಾಜಕಲ್ಯಾಣ
ಗೋವಿಂದಕಾರಜೋಳ- ಲೋಕೋಪಯೋಗಿ
ಸಿ.ಟಿ.ರವಿ-ಉನ್ನತ ಶಿಕ್ಷಣ/ ವೈದ್ಯಕೀಯ
ಡಾ.ಸಿ.ಎನ್.ಅಶ್ವತ್ಥನಾರಾಯಣ-ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವಿ.ಸೋಮಣ್ಣ-ನಗರಾಭಿವೃದ್ಧಿ/ ವಸತಿ
ಎಚ್.ನಾಗೇಶ್-ಸಣ್ಣಕೈಗಾರಿಕೆ
ಪ್ರಭುಚೌಹ್ವಾಣ್-ಯುವಜನ ಮತ್ತುಕ್ರೀಡೆ
ಬಸವರಾಜಬೊಮ್ಮಾಯಿ-ಬೃಹತ್‍ಕೈಗಾರಿಕೆ
ಕೋಟಾಶ್ರೀನಿವಾಸಪೂಜಾರಿ- ಬಂದರು, ಮೀನುಗಾರಿಕೆ, ಮುಜರಾಯಿ
ಎಸ್.ಸುರೇಶ್‍ಕುಮಾರ್-ಪ್ರಾಥಮಿಕ ಶಿಕ್ಷಣ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರ
ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ್ ಸವದಿ-ಸಹಕಾರ
ಜೆ.ಸಿ.ಮಾಧುಸ್ವಾಮಿ-ಗ್ರಾಮೀಣಾಭಿವೃದ್ಧಿ
ಸಿ.ಸಿ.ಪಾಟೀಲ್-ಅಬಕಾರಿ