ಟೆಲಿಪೋನ್ ಕದ್ದಾಲಿಕೆ ಪ್ರಕರಣ-ಸಿಬಿಐ ತನಿಖೆಗೆ ವಹಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ

ಬೆಂಗಳೂರು- ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

೨೦೧೮ರ ಆಗಸ್ಟ್ ೧ರಿಂದ ಮೈತ್ರಿ ಸರ್ಕಾರದ ಅವಧಿಯಲ್ಲಿನ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಗೃಹ ಇಲಾಖೆ ಅಧಿಕೃತ ಆದೇಶ ರವಾನಿಸಿದೆ.

೨೦೧೮ ಆಗಸ್ಟ್ ೧ ರಿಂದ ಪ್ರಸಕ್ತ ದಿನದರೆಗೆ ನಡೆದಿರುವ ದೂರವಾಣಿ ಕದ್ದಾಲಿಕೆಯ ಸಮಗ್ರ ತನಿಖೆ ನಡೆಸಲು ಮನವಿ ಮಾಡಲಾಗಿದೆ.

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟೆಲಿಪೋನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಡಿಜಿ- ಐಜಿಪಿ ವರದಿಯಲ್ಲಿ ಪೋನ್ ಟ್ಯಾಪಿಂಗ್ ವಿವರವನ್ನು ಬಹಿರಂಗಗೊಳಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಆರ್. ಅಶೋಕ್ ಹಾಗೂ ಅನರ್ಹಗೊಂಡ 17 ಶಾಸಕರ ಪೋನ್ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ. ಮಲ್ಲಿಕಾರ್ಜುನ ಖರ್ಗೆ , ಎಂಬಿ ಪಾಟೀಲ್ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಆಗ್ರಹಿಸಿದ್ದರೆ ಡಿಕೆ ಶಿವಕುಮಾರ್ ಅಂತಹ ಆರೋಪವನ್ನು ತಳ್ಳಿಹಾಕಿದ್ದರು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತರ ಪೋನ್ ಕದ್ದಾಲಿಕೆ ಮಾಡಲಾಗಿತ್ತು ಎಂಬ ವರದಿಗಳು ಕೇಳಿಬಂದಿದ್ದವು.

ಗುಪ್ತಚರ ಇಲಾಖೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದ ಕುಮಾರಸ್ವಾಮಿ ತಮ್ಮ ಒಪ್ಪಿಗೆ ಇಲ್ಲದೆ ಟೆಲಿಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದರು. ಈ ಪ್ರಕರಣದ ಹಿಂದೆ ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡಾ ಆರೋಪಿಸಿದ್ದರು.

ಟೆಲಿಪೋನ್ ಕದ್ದಾಲಿಕೆ ಮೂಲಕ ಕುರ್ಚಿಯನ್ನು ಉಳಿಸಿಕೊಳ್ಳುವ ಅಗತ್ಯತೆ ಇರಲಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಪೊಲೀಸ್ ಆಯುಕ್ತರ ಹುದ್ದೆಗಾಗಿ ಲಾಬಿಗಾಗಿ ದೆಹಲಿ ಮೂಲದ ವ್ಯಕ್ತಿಯೊಬ್ಬರೊಂದಿಗೆ ನಡೆಸಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆ ಸಂಬಂಧ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ತಿಂಗಳ ಆರಂಭದಲ್ಲಿ ಪೋನ್ ಕದ್ದಾಲಿಕೆ ಕುರಿತಂತೆ ತನಿಖೆಗೆ ಆದೇಶಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ