ನವದೆಹಲಿ, ಆ.19- ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೆರಳುತ್ತಿದ್ದ ಕಾರಿಗೆ ಅಪಘಾತವಾದ ಪ್ರಕರಣದ ತನಿಖೆಯನ್ನು ಇನ್ನೆರಡು ವಾರಗಳಲ್ಲಿ ಪೂರ್ಣಗೊಳಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಸುಪ್ರೀಂಕೋರ್ಟ್ ಇಂದು ಗಡುವು ನೀಡಿದೆ.
ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಸಿಬಿಐ ಕೋರಿಕೆ ಮೇರೆಗೆ ಎರಡು ವಾರಗಳ ವಿಸ್ತರಣೆ ಮಂಜೂರು ಮಾಡಿತು.
ಈ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಮತ್ತು ಆಕೆಯ ವಕೀಲೆಯ ಹೇಳಿಕೆಗಳನ್ನು ಪಡೆಯಲು ತನಗೆ ಕನಿಷ್ಠ ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿತ್ತು. ಆದರೆ, ಸುಪ್ರೀಂಕೋರ್ಟ್ ಎರಡು ವಾರಗಳಿಗೆ ಮಾತ್ರ ಸಮಯಾವಕಾಶ ವಿಸ್ತರಿಸಿತು.
ಅಪಘಾತದಲ್ಲಿ ತೀವ್ರ ಗಾಯಗೊಂಡು ಶೋಚನೀಯ ಸ್ಥಿತಿಯಲ್ಲಿರುವ ವಕೀಲೆಗೆ 5 ಲಕ್ಷ ರೂ.ಗಳನ್ನು ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಸೂಚಿಸಿದೆ.
ಉತ್ತರ ಪ್ರದೇಶದ ರಾಯ್ ಬರೇಲಿ ಬಳಿ ಉನ್ನಾವೋ ಗ್ಯಾಂಗ್ ರೇಪ್ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಮೂವರು ಮೃತಪಟ್ಟು, ಇತರ ಇಬ್ಬರು ತೀವ್ರ ಗಾಯಗೊಂಡರು.
ಉನ್ನಾವೋ ಸಾಮೂಹಿತ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಬಿಜೆಪಿ ಉಚ್ಛಾಟಿಸಿದೆ.