ಸರ್ಕಾರ ಬೀಳುವ ಮೊದಲಿದ್ದ ಕಾಳಜಿ, ಪ್ರೀತಿ ಈಗೇಕಿಲ್ಲ?; ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದ ಅನರ್ಹ ಶಾಸಕರು

ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರ ಮೇಲೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ, ಸರ್ಕಾರವನ್ನೇ ಉರುಳುವಂತೆ ಮಾಡಿದ್ದ ಶಾಸಕರು ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ

ಬಿಜೆಪಿ ನಾಯಕರನ್ನು ನಂಬಿ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡಿದ್ದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಿದ್ದರು. ಈ ಆದೇಶದ ವಿರುದ್ಧ ಅನರ್ಹ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಆದರೆ, ಅದು ಇತ್ಯರ್ಥವಾಗುವವರೆಗೆ ಅವರ ರಾಜಕೀಯ ಜೀವನ ಅತಂತ್ರದಲ್ಲಿಯೇ ಇರಲಿದೆ. ಇತ್ತ ಮಂತ್ರಿ ಹುದ್ದೆ ನೀಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಈಗ ಅತೃಪ್ತ ಶಾಸಕರತ್ತ ತಿರುಗಿಯೂ ನೋಡುತ್ತಿಲ್ಲ.

ಅವರದೇ ಪಕ್ಷದ ಆಪ್ತರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಬಿಜೆಪಿ ನಾಯಕರು ಇದೀಗ ಹೈಕಮಾಂಡ್​ ಕಳುಹಿಸುವ ಅಂತಿಮ ಪಟ್ಟಿಗಾಗಿ ಕಾದು ಕುಳಿತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡಿರುವ ಅನರ್ಹ ಶಾಸಕರು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದ್ದಾರೆ. ಬಿಜೆಪಿ ನಾಯಕರ ನಡೆಯಿಂದ ತೀವ್ರ ಬೇಸತ್ತಿರೋ ಅನರ್ಹ ಶಾಸಕರು ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ಸುಪ್ರಿಂ ಕೋರ್ಟ್​ನಲ್ಲಿನ ಕಾನೂನು ಹೋರಾಟಕ್ಕೂ ಬಿಜೆಪಿ ನಾಯಕರು ಬೆಂಬಲ ನೀಡುತ್ತಿಲ್ಲ. ಕೋರ್ಟ್ ಹೋರಾಟದಲ್ಲೂ ಬಿಜೆಪಿ ನಾಯಕರು ಅಸಹಕಾರ ತೋರಿದ್ದಾರೆ. ನಮ್ಮ ರಕ್ಷಣೆಗೆ ಬಿಜೆಪಿ ನಾಯಕರು ಮುಂದೆ ಬರುತ್ತಿಲ್ಲ ಎಂದು ರೆಬೆಲ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬೀಳುವ ಮೊದಲು ಬಿಜೆಪಿಯವರಿಗೆ ನಮ್ಮ ಮೇಲಿದ್ದ ಪ್ರೀತಿ, ಕಾಳಜಿ ಈಗೇಕಿಲ್ಲ? ಎಂದು ಬಿಜೆಪಿ ನಾಯಕರ ವಿರುದ್ಧ ಮತ್ತು ವಿಧಾ‌ನ ಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ದವೂ ಅನರ್ಹರ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಾಳೆಯೂ ಮತ್ತೆ ಸಭೆ ನಡೆಸಿರುವ ಅನರ್ಹ ಶಾಸಕರು ಮುಂದೆ ಏನು ಮಾಡಬೇಕೆಂಬ ಬಗ್ಗೆ ನಿರ್ಧರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ