ಬೆಂಗಳೂರು, ಆ.19-ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಟೆಲಿಪೋನ್ ಕದ್ದಾಲಿಕೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ಕುಮಾರ್ ಅವರನ್ನು ಸೇವೆಯಿಂದ ಅಮಾನತುಪಡಿಸುವಂತೆ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.
ಟೆಲಿಪೋನ್ ಕದ್ದಾಲಿಕೆಯನ್ನು ಈಗಾಗಲೇ ಸರ್ಕಾರ ಸಿಬಿಐ ತನಿಖೆಗೆ ವಹಿಸುವುದಾಗಿ ಪ್ರಕಟಿಸಿದೆ. ಕಾನೂನಿನ ಸಂಕಷ್ಟಕ್ಕೆ ಸಿಲುಕಬಹುದೆಂಬ ಹಿನ್ನೆಲೆಯಲ್ಲಿ ಅಲೋಕ್ಕುಮಾರ್ ತಮ್ಮ ಪ್ರಭಾವ ಬಳಸಿಕೊಂಡು ಸಾಕ್ಷ್ಯಾಧಾರಗಳನ್ನು ನಾಶಪಡಿಸಬಹುದು. ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ದೂರು ನೀಡಿದ್ದಾರೆ.
ಅಲೋಕ್ಕುಮಾರ್ ಜೊತೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಸಿಬಿಯ ಡಿಸಿಪಿಯಾಗಿದ್ದ ಗಿರೀಶ್, ಸಿಐಡಿ ಮುಖ್ಯಸ್ಥರಾಗಿದ್ದ ಹೇಮಂತ್ ನಿಂಬಾಳ್ಕರ್, ಎಸಿಪಿ ರಾಮಚಂದ್ರ, ಡಿವೈಎಸ್ಪಿ ಯತಿರಾಜ್, ಇನ್ಸ್ಪೆಕ್ಟರ್ಗಳಾದ ಮಿರ್ಜಾ ಆಲಿ ಹಾಗೂ ಮಾಲತೇಶ್ ವಿರುದ್ಧ ಸಿಎಂಗೆ ದೂರು ಸಲ್ಲಿಕೆಯಾಗಿದೆ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿಸಿಬಿ ಮುಖ್ಯಸ್ಥರಾಗಿದ್ದ ಅಲೋಕ್ಕುಮಾರ್ ಪೋನ್ ಟ್ಯಾಪಿಂಗ್ ಮಾಡುವ ಕುರಿತ ಪತ್ರಕ್ಕೆ ಸಹಿ ಹಾಕಿದ್ದರು ಎನ್ನಲಾಗಿದೆ.
ಸಿಸಿಬಿಯ ಡಿಸಿಪಿಯಾಗಿದ್ದ ಗಿರೀಶ್ ಪೋನ್ ಟ್ಯಾಪಿಂಗ್ ತಾಂತ್ರಿಕ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದರು. ಸಿಸಿಬಿಯ ಎಸಿಪಿ ರಾಮಚಂದ್ರ, ಡಿವೈಎಸ್ಪಿ ಯತಿರಾಜ್ ಪೋನ್ ಟ್ಯಾಪಿಂಗ್ ಪತ್ರಕ್ಕೆ ಸಹಿ ಹಾಕಿದ್ದರ ಆರೋಪ ಎದುರಿಸುತ್ತಿದ್ದಾರೆ.
ದಿನದ 24 ಗಂಟೆಯೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಐಎಎಸ್, ಐಪಿಎಸ್ ಅಧಿಕಾರಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಪತ್ರಕರ್ತರ ದೂರವಾಣಿಯನ್ನು ಇನ್ಸ್ಪೆಕ್ಟರ್ಗಳಾದ ಮಿರ್ಜಾ ಅಲಿ ಮತ್ತು ಮಾಲತೇಶ್ ಕದ್ದಾಲಿಕೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಈ ಎಲ್ಲರನ್ನು ಕೂಡಲೇ ಸೇವೆಯಿಂದ ಅಮಾನತುಪಡಿಸಬೇಕು. ಇಲ್ಲದಿದ್ದರೆ ಯಾವುದೇ ಕ್ಷಣದಲ್ಲೂ ಅಧಿಕಾರ ದುರುಪಯೋಗಪಡಿಸಿಕೊಂಡು ಈಗಾಗಲೇ ದಾಖಲಾಗಿರುವ ಸಾಕ್ಷ್ಯಾಧಾರಗಳನ್ನು ನಾಶಪಡಿಸಬಹುದೆಂಬ ಹಿನ್ನೆಲೆಯಲ್ಲಿ ಅಮಾನತ್ತಿಗೆ ಶಾಸಕರು ಪಟ್ಟು ಹಿಡಿದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಲೋಕ್ಕುಮಾರ್ ಸಾಕಷ್ಟು ಪ್ರಭಾವಿ ವ್ಯಕ್ತಿಯಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಕೆಳಹಂತದ ಅಧಿಕಾರಿಗಳು ಅವರ ಮಾತನ್ನು ಕೇಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಸಾಕ್ಷ್ಯಾಧಾರಗಳನ್ನು ಸಿಬಿಐಗೂ ಸಿಗದಂತೆ ನಾಶಮಾಡಬಹುದು. ಸೇವೆಯಿಂದ ಅಮಾನತುಪಡಿಸಿದರೆ ಯಾವ ಸಾಕ್ಷ್ಯಾಧಾರಗಳು ಅವರ ಕೈಗೆ ಸಿಗುವ ಅವಕಾಶವಿರುವುದಿಲ್ಲ ಎಂದು ಬಿಎಸ್ವೈಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಲ್ಲದೆ ಅಲೋಕ್ಕುಮಾರ್ ಕೆಲವು ಪ್ರಭಾವಿ ರಾಜಕಾರಣಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಜೊತೆಗೆ ಇದೇ ರೀತಿ ಗಿರೀಶ್ ಸೇರಿದಂತೆ ಮತ್ತಿತರರಿಗೆ ರಾಜಕಾರಣಿಗಳ ಒಡನಾಟ ಇರುವುದರಿಂದ ಅಮಾನತು ಮಾಡುವುದೇ ಸರಿಯಾದ ಕ್ರಮ ಎಂದು ಶಾಸಕರು ಮನವವರಿಕೆ ಮಾಡಿಕೊಟ್ಟಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾದ ಮರುಕ್ಷಣವೇ ಸಚಿವರ ಜೊತೆ ಸಭೆ ನಡೆಸಿ ಅಧಿಕೃತವಾಗಿ ಸಿಬಿಐ ತನಿಖೆಗೆ ಆದೇಶ ಹೊರಡಿಸಲಾಗುವುದು. ಅಗತ್ಯ ಕಂಡುಬಂದರೆ ಈ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಯಡಿಯೂರಪ್ಪ ಶಾಸಕರಿಗೆ ಆಶ್ವಾಸನೆ ಕೊಟ್ಟಿದ್ದಾರೆ.
ಮೇಲ್ನೋಟಕ್ಕೆ ಆರೋಪ ಕಂಡುಬಂದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲೂ ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ಅಮಾನತು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ.