ಕಾಯ್ದೆಪ್ರಕಾರ ಯಾವುದೇ ವ್ಯಕ್ತಿಯ ದೂರವಾಣಿಗಳನ್ನು ಕದ್ದಾಲಿಕೆ ಮಾಡುವಂತಿಲ್ಲ-ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಂಗಳೂರು, ಆ.19-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರ ದೂರವಾಣಿ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಅಧಿಕಾರ ದುರುಪಯೋಗಪಡಿಸಿಕೊಂಡು ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಮತ್ತು ಪತ್ರಕರ್ತರ ದೂರವಾಣಿಗಳನ್ನು ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದರು.

ದೂರವಾಣಿ ಕಾಯ್ದೆಪ್ರಕಾರ ಯಾವುದೇ ವ್ಯಕ್ತಿಯ ದೂರವಾಣಿಗಳನ್ನು ಕದ್ದಾಲಿಕೆ ಮಾಡುವಂತಿಲ್ಲ. ಸಮಾಜಘಾತುಕ ಶಕ್ತಿಗಳ ದೂರವಾಣಿಯನ್ನು ಕದ್ದಾಲಿಕೆ ಮಾಡಬೇಕಾದರೂ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಎಂದರು.

ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಯಾದ ದಿನದಿಂದಲೇ ಯಡಿಯೂರಪ್ಪ, ಸಿದ್ದರಾಮಯ್ಯ ನನ್ನದು ಸೇರಿದಂತೆ ಅನರ್ಹಗೊಂಡ ಶಾಸಕರು ಹಾಗೂ ಎಲ್ಲಾ ಪಕ್ಷಗಳ ಶಾಸಕರು, ಅವರ ಆಪ್ತರು ಸೇರಿದಂತೆಮತ್ತಿತರ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗಿದೆ. ಹೀಗಾಗಿ ಇದರಬಗ್ಗೆ ಸಮಗ್ರತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನನ್ನ ಆಪ್ತನ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು.ಜೊತೆಗೆ ಬೇರೆ ಬೇರೆ ಪಕ್ಷಗಳ ಮುಖಂಡರ ದೂರವಾಣಿಗಳನ್ನು ಕದ್ದಾಲಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ಇದರಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿರುವುದರಿಂದ ರಾಜ್ಯ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಸಿಬಿಐನಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿಯಾಗಲಿ, ಯಾರೇ ಆಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ತಪ್ಪೇ ಮಾಡಿಲ್ಲ ಎಂದ ಮೇಲೆ ಹೆದರುವುದು ಏಕೆ? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

ಇನ್ನು ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ತಿರುಗೇಟು ಕೊಟ್ಟ ಜಗದೀಶ್‍ಶೆಟ್ಟರ್, ನೀವು ಒಂದು ವರ್ಷದ ಅಧಿಕಾರಾವಧಿಯಲ್ಲಿ ಎಷ್ಟು ಮಂದಿಯನ್ನು ವರ್ಗಾವಣೆ ಮಾಡಿದ್ದೀರಿ. ಡಿಸಿ, ಎಸ್‍ಪಿ ಸೇರಿದಂತೆ ಅನೇಕರು ವರ್ಗಾವಣೆಯಾಗಿದ್ದರು.ಹಾಗಾದರೆ ಆವಾಗಲೂ ಕಮೀಷನ್ ದಂಧೆ ನಡೆದಿತ್ತೇ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಮಾತನಾಡುವ ನೈತಿಕತೆ ಇಲ್ಲ. ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಮೊದಲು ಇನ್ನೊಬ್ಬರ ಬಗ್ಗೆ ಆರೋಪ ಮಾಡುವ ಅವರು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ