ನವದೆಹಲಿ, ಆ.19- ಮಹಿಳಾ ಮಾಜಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತೆಹೆಲ್ಕಾ ನಿಯತಕಾಲಿಕದ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ ತರುಣ್ ತೇಜ್ಪಾಲ್ಗೆ ಕಾನೂನು ಕಂಟಕ ಎದುರಾಗಿದೆ.
ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಹಿರಿಯ ಪತ್ರಕರ್ತ ತೇಜ್ಪಾಲ್ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇದರೊಂದಿಗೆ ತೆಹೆಲ್ಕಾ ಮ್ಯಾಗಝೈನ್ ಮುಖ್ಯಸ್ಥರ ವಿರುದ್ಧದ ಕಾನೂನು ಕುಣಿಕೆ ಬಿಗಿಯಾಗಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ತೇಜ್ಪಾಲ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಇನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಗೋವಾದ ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಗೋವಾದ ಪಂಚತಾರಾ ಹೋಟೆಲ್ ಒಂದರಲ್ಲಿ 2013ರಲ್ಲಿ ಎಲಿವೇಟರ್(ಲಿಫ್ಟ್) ಒಳಗೆ ಮಾಜಿ ಮಹಿಳಾ ಸಹದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದರೆಂದು ತೇಜ್ಪಾಲ್ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ.
ತಮ್ಮ ವಿರುದ್ಧ ಯುವತಿ ಮಾಡಿರುವ ಆರೋಪಗಳನ್ನು ತೆಹಲ್ಕಾ ನಿಯತಕಾಲಿದ ಮುಖ್ಯ ಸಂಪಾದಕರು ನಿರಾಕರಿಸಿದ್ದರು. ನವೆಂಬರ್ 30, 2013ರಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ತೇಜ್ಪಾಲ್ರನ್ನು ಬಂಧಿಸಿದ್ದರು. 2014ರ ಮೇ ತಿಂಗಳಿನಿಂದ ಇವರು ಜಾಮೀನಿನ ಮೇಲಿದ್ದಾರೆ.