ಬೆಂಗಳೂರು,ಆ.18- ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಠಿಸಿದ ಅವಘಡಗಳು ನಿಂತಿಲ್ಲ. ನೆರೆ ಸಂದರ್ಭದಲ್ಲಿ ಕೊಚ್ಚಿ ಹೋದವರ ಶವಗಳು ಪತ್ತೆಯಾಗುತ್ತಿವೆ.
ಇನ್ನೂ ನಡುಗಡ್ಡೆಯಲ್ಲಿ ಸಿಲುಕಿದವರನ್ನು ರಕ್ಷಿಸುವ ಪ್ರಯತ್ನಗಳು ಮುಂದುವರೆದಿವೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕುಸುನಾಳ ಗ್ರಾಮ ಸಮೀಪ ಕೃಷ್ಣಾ ನದಿ ಪ್ರವಾಹದಲ್ಲಿ ಆ.16ರಂದು ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಶವಗಳು ಇಂದು ಪತ್ತೆಯಾಗಿವೆ.
ಶಾಂತನಾಥ ಸಮಾಜ್(22) ಮತ್ತು ಲಕ್ಷ್ಮಣ್ ಸಮಾಜ್(20) ಇವರ ಶವಗಳು ಇಂದು ದೊರೆತಿವೆ.
ಕೃಷ್ಣಾನದಿಯಲ್ಲಿ ಪ್ರವಾಹದಲ್ಲಿ ಸಿಲುಕಿ ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ಥರಿಗೆ ನೆರವಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ಕೃಷ್ಣಾ ನದಿ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಮಾವಿನಕುರ್ವೆ ಸಮೀಪ ನೀರು ಪಾಲಾಗಿದ್ದ ತನ್ವೀರ್(22) ಎಂಬ ಯುವಕನ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ನೀರು ಪಾಲಾಗಿದ್ದ ಈತನ ಶವ ಇಂದು ಪತ್ತೆಯಾಗಿದೆ.
ಗದಗ ಜಿಲ್ಲೆ ನರಗುಂದ ತಾಲೂಕು ಕಾಲುವೆ ಬಳಿ ಮಹಿಳೆಯ ಶವವೊಂದು ಪತ್ತೆಯಾಗಿದೆ.ಮಲಪ್ರಭ ಬಲದಂಡೆ ಕಾಲುವೆಯಲ್ಲಿ 45 ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ವಿವರಗಳು ಲಭ್ಯವಾಗಿಲ್ಲ. ಮಲಪ್ರಭ ನದಿಯಿಂದ ಶವ ತೇಲಿಬಂದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕು ನೀಲಕಂಠರಾಯನ ಗದ್ದೆ ಗ್ರಾಮದಲ್ಲಿ ಕಳೆದ 10 ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಣೆ ಮಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.