ಯುವತಿಯ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ-ಸಿಸಿಬಿ ಪೊಲೀಸರಿಂದ ಯುವಕನ ಬಂಧನ

ಬೆಂಗಳೂರು, ಆ.18- ಯುವತಿಯ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ ತೆರೆದು ಹುಡುಗರೊಂದಿಗೆ ಸಲುಗೆಯಿಂದ ಚಾಟಿಂಗ್ ಮಾಡುತ್ತ ಅವರ ಖಾಸಗಿ ಪೋಟೋಗಳನ್ನು ಪಡೆದು ಬ್ಲಾಕ್‍ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಯು.ಚಂದನ್ (21) ಬಂಧಿತ ವಂಚಕ.

ಈತನಿಂದ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಪೋನ್‍ಗಳನ್ನು ಸಿಸಿಬಿ ಘಟಕದ ಸೈಬರ್ ಕ್ರೈಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಕಾಂ ವ್ಯಾಸಂಗ ಮಾಡುತ್ತಿದ್ದ ಈತ ವಾಮಮಾರ್ಗದಲ್ಲಿ ಹಣ ಸಂಪಾದನೆ ಮಾಡುವ ದುರಾಸೆಯಿಂದ ನಕಲಿ ಇನ್‍ಸ್ಟಾಗ್ರಾಂ ಖಾತೆಯನ್ನು ಸೃಷ್ಟಿಸಿ ಅಂತರ್ಜಾಲದಲ್ಲಿ ಹೆಣ್ಣು ಮಕ್ಕಳ ಭಾವಚಿತ್ರಗಳನ್ನು ಹುಡುಕಿ ಆಕರ್ಷಕ ಯುವತಿಯರ ಪೋಟೋಗಳನ್ನು ಡೌನ್‍ಲೋಡ್ ಮಾಡಿಕೊಂಡು ನಕಲಿ ಖಾತೆಗೆ ಅಳವಡಿಸಿಕೊಂಡು ಹುಡುಗರೊಂದಿಗೆ ಸ್ನೇಹ ಬೆಳೆಸಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಸಂಗತಿ ವಿಚಾರಣೆಯಿಂದ ತಿಳಿದುಬಂದಿದೆ.

ಕೃತ್ಯಕ್ಕೆ ಬಳಸಿದ ಸಿಮ್‍ಕಾರ್ಡ್‍ಗಳನ್ನು ತನ್ನ ಸ್ನೇಹಿತರ ಹೆಸರಿನ ದಾಖಲಾತಿಗಳನ್ನು ಬಳಸಿ ಪಡೆದಿರುವ ವಿಷಯವೂ ಕೂಡ ವಿಚಾರಣೆಯಿಂದ ತಿಳಿದುಬಂದಿದ್ದು, ತನಿಖೆ ಮುಂದುವರೆಸಲಾಗಿದೆ.

ಜರುಷಾ ಎಂಬ ಹೆಸರಿನ ಇನ್‍ಸ್ಟಾಗ್ರಾಂ ಖಾತೆ ಹೊಂದಿದ್ದವರ ಜತೆ ಆನ್‍ಲೈನ್ ಮೂಲಕ ಈತ ಸ್ನೇಹ ಸಂಪಾದಿಸಿದ್ದ. ನಂತರ ಅವರ ಖಾಸಗಿ ಕ್ಷಣಗಳ ಭಾವಚಿತ್ರಗಳನ್ನು ಪಡೆದು ಬ್ಲಾಕ್‍ಮೇಲ್ ಮಾಡಿ ಬೆದರಿಕೆ ಹಾಕಿ 15 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ.

ಇದರಿಂದ ಬೆದರಿದ ಅವರು 500ರೂ.ಗಳನ್ನು ಮುಂಗಡವಾಗಿ ವರ್ಗಾವಣೆ ಮಾಡಿದ್ದರು.ನಂತರ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ನಗರ ಸಿಸಿಬಿ ಘಟಕದ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಮತ್ತು ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಸಾಮಾಜಿಕ ಜಾಲತಾಣದ ಬಳಕೆದಾರರು ಯಾವುದೇ ಪ್ರಚೋದನೆ ಚಿತಾವಣೆ, ಕ್ಷಣಿಕ ಸಂತೋಷದ ಪ್ರಭಾವಕ್ಕೆ ಒಳಗಾಗಿ ಖಾಸಗಿ ಕ್ಷಣಗಳ ಭಾವಚಿತ್ರ ದೃಶ್ಯಾವಳಿಗಳನ್ನು ಹಂಚಿಕೊಂಡಲ್ಲಿ ನಂತರದ ದಿನಗಳಲ್ಲಿ ಬ್ಲಾಕ್‍ಮೇಲ್ ಅಥವಾ ಬೆದರಿಕೆಗೆ ಬಲಿಪಶುವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಇಂತಹ ಪ್ರಚೋದನೆಗೆ ಒಳಗಾಗಬಾರದೆಂದು ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ