ಬೆಂಗಳೂರು: ನಗರದಲ್ಲಿ ಶನಿವಾರ ತಡರಾತ್ರಿ ಭಾರೀ ಮಳೆ ಸುರಿದಿದೆ. ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ, ಶನಿವಾರ ಮಾತ್ರ ವರುಣ ಅಬ್ಬರಿಸಿದ್ದಾನೆ. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿದೆ.
ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಧೀಡಿರ್ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ವೀಕೆಂಡ್ ಮೋಜು-ಮಸ್ತಿಯಲ್ಲಿ ತೊಡಗಿದ್ದ ಅನೇಕರು ಮಳೆಗೆ ಶಪಿಸುತ್ತಾ ಮನೆಗೆ ತೆರಳುವ ದೃಶ್ಯ ಕಂಡುಬಂತು. ಭಾರೀ ಮಳೆಗೆ ಕೆಲವೆಡೆ ಒಳ ಚರಂಡಿ ತುಂಬಿ ಹರಿದು ರಸ್ತೆಯ ಮೇಲೆಲ್ಲ ಕೊಳಚೆ ತುಂಬಿದೆ.
ಇಂದು ಕೂಡ ಬೆಂಗಳೂರಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಉದ್ಯಾನ ನಗರಿ ಮೇಲೆ ವರುಣನ ಸಿಂಚನ ಆಗಬಹುದು.