ಬೆಂಗಳೂರು: ಬಹುಕೋಟಿ ರೂಪಾಯಿ ಮಣಿಪಾಲ್ ವಂಚನೆಯ ಪ್ರಮುಖ ಆರೋಪಿ ಸಂದೀಪ್ ಗುರುರಾಜ್ ಮತ್ತು ನೊರ್ಟೆ ಟೆಕ್ನಾಲಾಜಿಸ್ನ ಸಹ ಸಂಸ್ಥಾಪಕ ಪ್ರವೀಣ್ ಸುರೇಂದ್ರನ್ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ.
ಪ್ರವೀಣ್ ಸುರೇಂದ್ರನ್ ಪ್ರಸ್ತುತ ಕಬ್ಬನ್ಪಾರ್ಕ್ ಪೊಲೀಸರ ವಶದಲ್ಲಿದ್ದು, ಸಂದೀಪ್ ಜತೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪ್ರವೀಣ್ ಸುರೇಂದ್ರನ್ ನೊರ್ಟೆ ಟೆಕ್ನಾಲಾಜಿಸ್ನ ಮೂಲ ಸಂಸ್ಥಾಪಕ ಸೌರವ್ ಕುಮಾರ್ ಸಿಂಗ್ ಅವರ ಸಹಿಯನ್ನು ನಕಲಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾನೆ, ನೊರ್ಟೆ ಟೆಕ್ನಾಲಾಜಿಸ್ ಅನ್ನು ಬೆಂಗಳೂರಿನಲ್ಲಿ 2015 ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಸೌರವ್ ಕುಮಾರ್ ಸಿಂಗ್ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು. ಪ್ರವೀಣ್ ಸುರೇಂದ್ರನ್ ವಿರುದ್ಧ ಸೌರವ್ ಕುಮಾರ್ ಸಿಂಗ್ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಪ್ರವೀಣ್ ಸುರೇಂದ್ರನ್ ಶಕ್ತಿ ಕೇಂದ್ರದಲ್ಲಿ ಬಹಳ ಪ್ರಭಾವಶಾಲಿ ಎಂದು ತಿಳಿದುಬಂದಿದೆ.
ಈ ಹಿಂದೆ ಒಪಿಸಿ ಅಸೆಟ್ಸ್ ಸಲೂಶನ್ಸ್ನಲ್ಲಿ ಪ್ರವೀಣ್ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಮಣಿಪಾಲ್ ಗ್ರೂಪಿಗೆ ವೆಂಡರ್ ಆಗಿ ಕೆಲಸ ಮಾಡುತ್ತಿದ್ದಾಗ ಸಂದೀಪ್ನ ಪರಿಚಯವಾಗುತ್ತದೆ.
ನಂತರ ಸೌರವ್ ಜತೆ ಸೇರಿದ ಪ್ರವೀಣ್ ಪೀಪಲ್ ಲಾಜಿಸ್ಟಿಕ್ಸ್ ಕಂಪನಿಯನ್ನು ಆರಂಭಿಸಿ ಆಟೋಮೋಬೈಲ್ ಉದ್ಯಮಕ್ಕೆ ತಂತ್ರಜ್ಞಾನ ಪೂರೈಕೆ ಮಾಡುತ್ತಿದ್ದರು.
ಅವರಿಬ್ಬರೂ ತಾಂತ್ರಿಕವಾಗಿ ಪರಿಣತಿಯನ್ನು ಹೊಂದಿರುವುದಿಲ್ಲ, ಇವರೊಂದಿಗೆ ಶ್ರೀಕುಮಾರ್ ಸುಂದರಮೂರ್ತಿ ತಾಂತ್ರಿಕ ಸಹಯೋಗಕರಾಗಿ ಸೇರಿಕೊಳ್ಳುತ್ತಾರೆ.
ಸೌರವ್ ಸಿಂಗ್ ಮತ್ತು ಶ್ರೀಕುಮಾರ್ ಇಬ್ಬರೂ ಸೇರಿ ನೊರ್ಟೆ ಟೆಕ್ನಾಲಾಜಿಸ್ ಅನ್ನು ಸಮಪಾಲಿನಡಿ ಆರಂಭಿಸುತ್ತಾರೆ. ನಂತರ ಪ್ರವೀಣ್ನ ಪತ್ನಿ ಮಧು ಜಿಂದಾಲ್ ಅವರನ್ನು 2015 ರಲ್ಲಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗುತ್ತದೆ.
ಪ್ರವೀಣ್ ಮತ್ತು ಆತನ ಪರಿಚಿತ ವ್ಯಕ್ತಿ ನಿತಿನ್ ಮೆಹ್ತಾ ಇಬ್ಬರೂ 2016 ರ ಜನವರಿಯಲ್ಲಿ ಕಂಪನಿಗೆ ಸೇರಿದರೆ, 2016 ಫೆಬ್ರವರಿಯಲ್ಲಿ ಸಂದೀಪ್ ಹೆಚ್ಚುವರಿ ನಿರ್ದೇಶಕ ಹುದ್ದೆಗೆ ನೇಮಕಗೊಳ್ಳುತ್ತಾನೆ. ಕಾರ್ದೇಖೋ(ಗರ್ನರ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್, ಜೈಪುರ) ಕಂಪನಿಯು 3 ದಶಲಕ್ಷ ಯುಎಸ್ ಡಾಲರ್ ಮೌಲ್ಯದ್ದಾಗಿರುತ್ತದೆ. ಇದರಲ್ಲಿ 50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರಿಂದ ಸಂದೀಪ್ಗೆ ಶೇ.2 ರಷ್ಟು ಶೇರುಗಳನ್ನು ನೀಡಲಾಗುತ್ತದೆ. ಸಂದೀಪ್ 2 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಒಪ್ಪಿರುತ್ತಾನೆ ಮತ್ತು ಶೇ.10 ರಷ್ಟು ಪಾಲನ್ನು ಹೊಂದಲು ಒಡಂಬಡಿಕೆಯಾಗುತ್ತದೆ. ಅದರಂತೆ 1.37 ಕೋಟಿ ರೂಪಾಯಿ ಮೌಲ್ಯದ ಚೆಕ್ ಮತ್ತು ಉಳಿದದ್ದನ್ನು ನಗದು ರೂಪದಲ್ಲಿ ಹೂಡಿಕೆ ಮಾಡುತ್ತಾನೆ. ಆದರೆ, 50,000 ಶೇರುಗಳ ಪೈಕಿ ಆತನಿಗೆ ಕೇವಲ 1000 ಶೇರುಗಳನ್ನು ನೀಡಲಾಗುತ್ತದೆ.
ಸಂದೀಪ್ ಮತ್ತು ಪ್ರವೀಣ್ ಇಬ್ಬರೂ ಶ್ರೀಕುಮಾರ್ ಜತೆ ಸೇರಿ ಸೌರವ್ ಕುಮಾರ್ ಅವರನ್ನು ಕಂಪನಿಯಿಂದ ಹೊರ ಹಾಕಲು ಸಂಚು ರೂಪಿಸುತ್ತಾರೆ. ಈ ಮೂಲಕ ಮೂವರೂ ಸೇರಿ ಸೌರವ್ ಕುಮಾರ್ ಹೆಸರಿನಲ್ಲಿ ನಕಲಿ ರಾಜೀನಾಮೆ ಪತ್ರವನ್ನು ಸೃಷ್ಟಿ ಮಾಡುತ್ತಾರೆ. ಏನೋ ಕುತಂತ್ರ ನಡೆದಿದೆ ಎಂಬುದನ್ನು ಗ್ರಹಿಸಿದ ಸೌರವ್ ಈ ಬಗೆಗಿನ ವಿವರಗಳನ್ನು ನೀಡುವಂತೆ ಕಂಪನಿ ರಿಜಿಸ್ಟ್ರಾರ್ಗೆ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿಂದ ತೆಗೆದುಕೊಂಡ ಮಾಹಿತಿಗಳನ್ನು ಪರಿಶೀಲಿಸಿದಾಗ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಮತ್ತು ಕಂಪನಿಯನ್ನು ಹಸ್ತಾಂತರಿಸಲಾಗಿದೆ ಎಂಬುದು ಬೆಳಕಿಗೆ ಬರುತ್ತದೆ. ಇದಲ್ಲದೇ, ಸೌರವ್ ಹೆಸರಿನಲ್ಲಿದ್ದ ಶೇರುಗಳನ್ನು ಪ್ರವೀಣ್, ಮಧು ಮತ್ತು ಸಂದೀಪ್ ಮೂವರೂ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂದೀಪ್ ಹಲವು ಹಂತಗಳಲ್ಲಿ ಹೂಡಿಕೆ ಮಾಡುತ್ತಾನೆ. ನಂತರ ಮಣಿಪಾಲ್ ಗ್ರೂಪ್ನಲ್ಲಿದ್ದುಕೊಂಡು ಈ ಕಂಪನಿಯ ನಿರ್ದೇಶಕನಾಗಲು ಬರುವುದಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಾನು ಹೂಡಿಕೆ ಮಾಡಿರುವ ಹಣಕ್ಕೆ ಬಡ್ಡಿಯನ್ನು ನೀಡುವಂತೆ ಕೇಳುತ್ತಾನೆ.
ಮಾಧ್ಯಮ ವರದಿಗಳ ಪ್ರಕಾರ ಕಂಪನಿಯು ಒಂದೂವರೆ ವರ್ಷ ನಡೆದುಕೊಂಡು ಹೋಗುತ್ತದೆ. 2018 ರ ಮೊದಲ ತ್ರೈಮಾಸಿಕದಲ್ಲಿ ಪ್ರವೀಣ್ ಮತ್ತು ಇತರೆ ನಿರ್ದೇಶಕರು ಫ್ರೆಂಚ್ನ ಯೂರೋಪ್ ಅಸಿಸ್ಟೆನ್ಸ್ನ 50 ಕೋಟಿ ರೂಪಾಯಿಗಳ ಒಪ್ಪಂದವನ್ನು ಅಂತ್ಯಗೊಳಿಸುತ್ತಾರೆ. ನಂತರ ಐಪಿಯನ್ನು ಪ್ರತ್ಯೇಕವಾಗಿ ಒಎನ್ಬಿ ಟೆಕ್ನಾಲಾಜಿಗೆ ಮಾರಾಟ ಮಾಡುತ್ತಾರೆ. ಸಿಂಗಾಪೂರದ ಒಎನ್ಬಿ ಟೆಕ್ನಾಲಾಜಿಸ್ ಅನ್ನು ಯೂರೋಪ್ ಅಸೆಸ್ಟೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಆಶ್ಚರ್ಯವೆಂದರೆ ಭಾರತ ಮತ್ತು ಸಿಂಗಾಪೂರದಲ್ಲಿರುವ ಒಎನ್ಬಿ ಟೆಕ್ನಾಲಾಜಿಸ್ಗೆ ಪ್ರವೀಣ್, ಮಧು, ಶ್ರೀಕುಮಾರ್ ಮತ್ತು ನಿತಿನ್ ಕುಮಾರ್ ಅವರು ಪ್ರಸ್ತುತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.