ಬೆಂಗಳೂರು, ಆ.18- ಕನ್ನಡ ಚಿತ್ರನಟರ ಹೆಸರು ಮತ್ತು ಚಲನಚಿತ್ರಗಳನ್ನು ಬಳಸಿ ನಕಲಿಯಾಗಿ ಸೃಷ್ಟಿಸಿದ ಫೇಸ್ಬುಕ್ ಖಾತೆ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ವೆಂಕಟೇಶ್ ಭಾವಸಾರ್ (22) ಬಂಧಿತ ವಂಚಕ.
ಈತನಿಂದ ಕೃತ್ಯಕ್ಕೆ ಬಳಕೆ ಮಾಡಿದ ಮೊಬೈಲ್ ಪೋನ್ಗಳನ್ನು ಸಿಸಿಬಿ ಘಟಕದ ಸೈಬರ್ ಕ್ರೈಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತನ ಬಂಧನದಿಂದ ಅನೇಕ ಯುವತಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ವಂಚಿಸಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕ ವೆಂಕಟೇಶ್ ಚಲನಚಿತ್ರ ನಟನೆ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಯುವತಿಯರನ್ನು ಪರಿಚಯಿಸಿಕೊಂಡು ನಂತರ ಸಲುಗೆಯಿಂದ ಚಾಟಿಂಗ್ ಮಾಡುತ್ತಿದ್ದ. ಈತನ ಮಾತಿಗೆ ಮರುಳಾದ ಯುವತಿಯರು ತಮಗೆ ಸಿನಿಮಾಗಳಲ್ಲಿ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದರು.
ತಾನು ಡಿಸೆಂಬರ್ವರೆಗೆ ಬ್ಯುಸಿ. ಆದ್ದರಿಂದ ಮಾತನಾಡಲು ಸಮಯವಿಲ್ಲ ಎಂದು ಸಂದೇಶ ರವಾನಿಸಿದ್ದ. ಪರಿಚಿತರಾದ ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕಲ್ಪಿಸಲು ತನ್ನ ಸಹಾಯಕ ವೆಂಕಿರಾವ್ ಎಂಬಾತನನ್ನುಸಂಪರ್ಕಿಸುವಂತೆ ಸೂಚಿಸಿ ವಾಟ್ಸಾಪ್ ಸಂದೇಶ ನೀಡುತ್ತಿದ್ದ.
ನಂತರ ವೆಂಕಿರಾವ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಚಾಟಿಂಗ್ ಮುಂದುವರಿಸುತ್ತ ಪರಿಚಿತ ಮಹಿಳೆಯರು ಮತ್ತು ಅವರ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಭೇಟಿ ಮಾಡುತ್ತಿದ್ದ.ನಿಮ್ಮ ಮಗಳಿಗೆ ಸಿನಿಮಾದಲ್ಲಿ ಉತ್ತಮ ಭವಿಷ್ಯವಿದೆ. ಆಕೆಗೆ ನಟಿಸಲು ಅವಕಾಶ ನೀಡುವುದಾಗಿ ನಯವಾದ ಮಾತುಗಳಿಂದ ವಂಚಿಸಿ 25 ಸಾವಿರ ರೂ.ಗಳನ್ನು ಪಡೆದು ಮೋಸ ಮಾಡುತ್ತಿದ್ದ.
ಸಿನಿಮಾದಲ್ಲಿ ಅವಕಾಶಕ್ಕಾಗಿ ನಿರೀಕ್ಷಿಸುತ್ತಿದ್ದ ಯುವತಿಯರಿಗೆ ಈತನಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ವಿಡಿಯೋ ಕಾಲ್ ಮೂಲಕ ಈತನನ್ನು ಯುವತಿಯರು ಸಂಪರ್ಕಿಸಲು ಯತ್ನಿಸುತ್ತಿದ್ದರು. ಆಕಸ್ಮಿಕವಾಗಿ ಕಾಲ್ ರಿಸೀವ್ ಆಗಿ ಆರೋಪಿಯನ್ನು ನೋಡಿದ ಯುವತಿಯರು ಈ ಬಗ್ಗೆ ಪ್ರಶ್ನಿಸಿದಾಗ ಕಾಲ್ ಮರ್ಜ್ ಆಗಿದೆ ಎಂಬ ನೆಪ ಹೇಳಿ ನುಣುಚಿಕೊಳ್ಳುತ್ತಿದ್ದ. ಟ್ರೂ ಕಾಲರ್ನಲ್ಲೂ ಕೂಡ ಸಿನಿಮಾದವರ ಹೆಸರು ಕಾಣುವಂತೆ ಎಡಿಟ್ ಮಾಡುವ ವಂಚಕ ಬುದ್ಧಿ ಈತನಿಗೆ ತಿಳಿದಿತ್ತು.
ಚಲನಚಿತ್ರ ನಟರಿಗೆ ನಿಮ್ಮೊಂದಿಗೆ ಪ್ರೀತಿ ಅಂಕುರವಾಗಿದೆ. ನಿಮ್ಮನ್ನು ಮದುವೆಯಾಗಲು ಅವರು ಬಯಸುತ್ತಿದ್ದಾರೆ ಎಂದು ಯುವತಿಯರನ್ನು ನಂಬಿಸಿ ಅವರನ್ನು ಮರುಳು ಮಾಡುತ್ತಿದ್ದ.
ಈತ ಬಳಸುತ್ತಿದ್ದ ಚಿತ್ರನಟರ ಹೆಸರು ಮತ್ತು ಪೋಟೋಗಳಿಂದ ನಿಜವಾದ ನಟರು ಸಮಸ್ಯೆಗೆ ಸಿಲುಕಿದಾಗ ವೆಂಕಟೇಶ್ ವಂಚನೆ ವೃತ್ತಾಂತ ಬಯಲಾಯಿತು.
ಈ ಸಂಬಂಧ ಮಹಿಳೆಯರು ಮತ್ತು ಯುವತಿಯರು ನೀಡಿದ ದೂರಿನ ಮೇಲೆ ಬೆಂಗಳೂರು ನಗರ ಸಿಸಿಬಿ ಘಟಕದ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯಶ್ವಂತ್ಕುಮಾರ್ ಮತ್ತು ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಇಂತಹ ನಕಲಿ ಫೇಸ್ಬುಕ್ ಬಗ್ಗೆ ಎಚ್ಚರವಾಗಿರುವಂತೆ ಸಿಸಿಬಿ ಪೊಲೀಸರು ಯುವತಿಯರಿಗೆ ಎಚ್ಚರಿಕೆ ನೀಡಿದ್ದಾರೆ.