
ಬೆಂಗಳೂರು,ಆ.18-ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ವಿವಾದ ಸೃಷ್ಟಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ.
ಸರ್ಕಾರದ ಈ ನಡೆಯಿಂದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಾಲಿ ಕೆಎಸ್ ಆರ್ಪಿ ಎಡಿಜಿಪಿ ಅಲೋಕ್ಕುಮಾರ್, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ಎಸಿಪಿ, ಇನ್ಸ್ಪೆಕ್ಟರ್ಗಳು ಸೇರಿದಂತೆ ಮತ್ತಿತರರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ , ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ನಾಳೆ ಮತ್ತೊಮ್ಮೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕೃತವಾಗಿ ಸಿಬಿಐ ತನಿಖೆಗೆ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ತಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು. ಹೀಗಾಗಿ ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ. ಕಾನೂನಿನ ಪ್ರಕಾರ ತಪ್ಪು ಮಾಡಿದವರು ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದರು.
ಮೂಲಗಳ ಪ್ರಕಾರ ಗೃಹ ಸಚಿವರು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸೂಚನೆ ಮೇರೆಗೆ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲು ಯಡಿಯೂರಪ್ಪ ಕೊನೆಕ್ಷಣದಲ್ಲಿ ತೀರ್ಮಾನಿಸಿದರು ಎನ್ನಲಾಗಿದೆ.
ಈ ಮೊದಲು ಅವರು ವಿಶೇಷ ತನಿಖಾ ದಳ(ಎಸ್ಐಟಿ)ಕ್ಕೆ ವಹಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಅಮಿತ್ ಷಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಸಿಬಿಐನಿಂದಲೇ ತನಿಖೆ ನಡೆಸುವಂತೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ತಡರಾತ್ರಿ ದೆಹಲಿಯಿಂದ ಆಗಮಿಸಿದ ಯಡಿಯೂರಪ್ಪ ಬೆಳಗ್ಗೆ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆ ಆದೇಶವನ್ನು ಮಾಧ್ಯಮಗಳ ಮುಂದೆ ಪ್ರಕಟಿಸಿದರು.
ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಭಾಸ್ಕರ್ರಾವ್ , ಹಿಂದಿನ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಬೆಂಗಳೂರು ನಗರ ಆಯುಕ್ತರ ಹುದ್ದೆಗೆ ಪರಿಗಣಿಸುವಂತೆ ದೆಹಲಿ ಮೂಲದ ಕಾಂಗ್ರೆಸ್ ನಾಯಕರೊಬ್ಬರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಪೊಲೀಸ್ ಮಾಹಾ ನಿರ್ದೇಶಕರಾದ ನೀಲಮಣಿ ಎಂ.ರಾಜು ಅವರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.
ತನಿಖೆ ನಡೆಸಿ ಡಿಜಿಗೆ 30 ಪುಟಗಳ ವರದಿ ನೀಡಿದ್ದ ಸಂದೀಪ್ ಪಾಟೀಲ್, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಅವರ ಆಪ್ತರು, ಐಪಿಎಸ್, ಐಎಎಸ್ ಅಧಿಕಾರಿಗಳು, ಪತ್ರಕರ್ತರು, ಆಪ್ತ ಸಹಾಯಕರು ಸೇರಿದಂತೆ ಮತ್ತಿತರರು ಸೇರಿದಂತೆ ಸುಮಾರು 180ಕ್ಕೂ ಹೆಚ್ಚು ವ್ಯಕ್ತಿಗಳ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗಿದ್ದು, ಉನ್ನತ ಮಟ್ಟದ ತನಿಖೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಲಗಳ ಪ್ರಕಾರ ಹಾಲಿ ಸಿಎಂ ಯಡಿಯೂರಪ್ಪ, ಅವ ಆಪ್ತ ಸಹಾಯಕ ಸಂತೋಷ್, ಮಾಜಿ ಸಿಎಂ ಸಿದ್ದರಾಮಯ್ಯ, ಅವರ ಪುತ್ರ ಹಾಲಿ ಶಾಸಕ ಯತೀಂದ್ರ, ಸಹಾಯಕರಾದ ವೆಂಕಟೇಶ್, ಉಮೇಶ್, ಮಾಜಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಆರ್.ಅಶೋಕ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್, ಡಾ.ಅಶ್ವಥ್ನಾರಾಯಣ, ಸಿ.ಟಿ.ರವಿ, ಮಾಧುಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಚಿತ್ರನಟರಾದ ಯಶ್, ದರ್ಶನ್, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಚೆಲುವರಾಯಸ್ವಾಮಿ, ಅನರ್ಹಗೊಂಡ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ಭೆರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ಪ್ರತಾಪ್ಗೌಡ ಪ್ರಾಟೀಲ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ಕೆಲವು ಶಾಸಕರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಕೇಳಿಬರುತ್ತಿದೆ.
ಇದೀಗ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿರುವುದರಿಂದ ಯಾರ್ಯಾರಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.