ಹುಬ್ಬಳ್ಳಿ,ಆ.18- ಪೋನ್ ಕದ್ದಾಲಿಕೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆಯಷ್ಟೇ; ಆದರೆ ತನಿಖೆ ತೋಳ ಬಂತು ತೋಳ ಎಂಬಂತಾಗದೆ ಪ್ರಾಮಾಣಿಕ ತನಿಖೆಯಾಗಲಿ. ಅದನ್ನು ಬಿಟ್ಟು ಕುಮಾರಸ್ವಾಮಿಯವರ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಬೇಡ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜಹೊರಟ್ಟಿ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದರಿಂದ ಅವರಿಗೆ ಸದುಪಯೋಗವಾಗುತ್ತದೆ ಎಂದು ಸಿಬಿಐಗೆ ವಹಿಸಲಾಗಿದೆ.
ಆದರೆ ಸಿಬಿಐ ಕೇಂದ್ರದ ಮುಖ ನೋಡಿ ತನಿಖೆ ಮಾಡದೆ, ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಹೇಳಿದರು.
ಈ ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐ ಸರಿಯಾಗಿ ತನಿಖೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರಬರುತ್ತೆ ಎಂದ ಅವರು, ರಾಜಕಾರಣ ಹೊಲಸೆದ್ದು ಹೋಗಿದೆ. ಇದೀಗ ಸತ್ಯ ಹೊರಬರಬೇಕಿದೆ.
ಸಿಬಿಐಗೆ ವಹಿಸುವುದರಿಂದ ಸತ್ಯಾಂಶ ಹೊರಬರುತ್ತದೆ ಎಂಬ ನಂಬಿಕೆಯಿಲ್ಲ. ನಮ್ಮ ರಾಜ್ಯದಲ್ಲೇ ಅನೇಕ ಇಲಾಖೆಗಳಿದ್ದು ಅವುಗಳಿಂದ ತನಿಖೆ ಮಾಡಿಸಬಹುದಿತ್ತು. ಆದರೂ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.
ಪೋನ್ ಕದ್ದಾಲಿಕೆಯಷ್ಟೆ ಅಲ್ಲ; ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಕೂಡ ಸಿಬಿಐಗೆ ವಹಿಸಬೇಕೆಂದು ಹೊರಟ್ಟಿ ಒತ್ತಾಯಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಪೋನ್ ಕದ್ದಾಲಿಕೆಯಾಗಿತ್ತು.ಆಗ ಅಶೋಕ ಮತ್ತು ಜಗದೀಶ್ ಶೆಟ್ಟರ್ ಸುಮ್ಮನೆ ಕುಳಿತಿದ್ದರು.
ಅದು ದೇಶಕ್ಕೆ ಮತ್ತು ರಾಜ್ಯಕ್ಕೆ ಗಂಡಾಂತರ ಬಂದಾಗ ಪೋನ್ ಟ್ಯಾಪ್ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಪೋನ್ ಕದ್ದಾಲಿಕೆ ಮಾಡಿದರೆ ಸಿಬಿಐ ಏನೂ ಜೈಲಿಗೆ ಹಾಕುತ್ತಾ ಎಂದು ಪ್ರಶ್ನಿಸಿದರು