ಬೆಂಗಳೂರು, ಆ.18- ಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಲು ತೀರ್ಮಾನಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ನಿರ್ಧಾರವನ್ನು ಟ್ವಿಟರ್ ಮೂಲಕ ಸ್ವಾಗತಿಸಿರುವ ಸಿದ್ದರಾಮಯ್ಯನವರು ಬಿಜೆಪಿ ಸಿಬಿಐನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ಪೋನ್ ಕದ್ದಾಲಿಕೆಯ ಆರೋಪವನ್ನು ನನ್ನ ಮನವಿ ಮೇರೆಗೆ ಒಪ್ಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಇತ್ತೀಚಿನ ಆಪರೇಷನ್ ಕಮಲದಲ್ಲಿಯೂ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಇದೆ. ಅದರ ಬಗ್ಗೆಯೂ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಯವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷ ಸತತವಾಗಿ ಒತ್ತಾಯ ಮಾಡಿದರೂ ಒಂದೇ ಒಂದೂ ಪ್ರಕರಣವನ್ನೂ ಸ್ವಯಂಪ್ರೇರಿತವಾಗಿ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಬಿಜೆಪಿಗೆ ಕೇಂದ್ರ ತನಿಖಾ ಸಂಸ್ಥೆ ಮೇಲೆ ನಂಬಿಕೆ ಹುಟ್ಟಿರುವುದು ಆಶ್ಚರ್ಯಕರ ಬೆಳವಣಿಗೆ ಎಂದು ಟೀಕಿಸಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್, ಟೆಲಿಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ವಿರೋಧಿಸಿ ಟೀಕೆ ಮಾಡಿತ್ತು. ಸಿದ್ದರಾಮಯ್ಯನವರು ಸ್ವಾಗತಿಸಿದ ಬೆನಲ್ಲೇ ಟ್ವೀಟ್ನ್ನು ಕಾಂಗ್ರೆಸ್ ಡಿಲೀಟ್ ಮಾಡಿದೆ.