ಟೆಲಿಪೋನ್ ಕದ್ದಾಲಿಕೆ ಆರೋಪ ಸಿಬಿಐ ತನಿಖೆಗೆ-ದ್ವೇಷದ ರಾಜಕಾರಣವಿಲ್ಲ-ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್

ಬೆಂಗಳೂರು,ಆ.18- ಟೆಲಿಪೋನ್ ಕದ್ದಾಲಿಕೆ ಆರೋಪವನ್ನು ಸಿಬಿಐ ತನಿಖೆಗೆ ವಹಿಸಿರುವುದರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಲಿಪೋನ್ ಕದ್ದಾಲಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತನಿಖೆಗೆ ಒತ್ತಾಯ ಮಾಡಿದ್ದರು.

ವಿರೋಧ ಪಕ್ಷಗಳ ನಾಯಕರ ಭಾವನೆಗಳಿಗೆ ಬೆಲೆ ಕೊಟ್ಟು ಮುಖ್ಯಮಂತ್ರಿ ಯಡಿಯೂರಪ್ಪನವರು ತನಿಖೆಗೆ ವಹಿಸಿದ್ದಾರೆಯೇ ಹೊರತು ಇದು ಅವರೊಬ್ಬರದೇ ತೀರ್ಮಾನವಲ್ಲ. ಆದರೆ ತನಿಖೆಗೆ ವಹಿಸಿದ ನಂತರ ಕಾಂಗ್ರೆಸ್ ಉಲ್ಟಾ ಹೊಡೆದಿದೆ ಎಂದು ಟೀಕಿಸಿದರು.

ಟೆಲಿಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಯಾರೂ ಪೋನ್ ಕದ್ದಾಲಿಕೆ ಮಾಡಿಸಿದ್ದಾರೆ ಎಂಬುದೇ ಗೊತ್ತಿಲ್ಲ. ಆದರೂ ಹೇಗೆ ದ್ವೇಷದ ರಾಜಕಾರಣವಾಗಲಿದೆ ಎಂದು ಪ್ರಶ್ನಿಸಿದರು.

ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕೆಂಬುದು ನಮ್ಮ ಒತ್ತಾಯ. ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಯಾವುದೇ ಪಾತ್ರವಿಲ್ಲ. ಅನಗತ್ಯವಾಗಿ ಅವರ ಹೆಸರನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೇಂದ್ರದಿಂದ ನೆರವಿನ ಭರವಸೆ:
ಕೇಂದ್ರ ಸರ್ಕಾರ ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಗೆ ಪರಿಹಾರ ನೀಡಲಿದೆ.ಕೇರಳಕ್ಕೆ ಸಿಎಸ್‍ಆರ್ ಅಡಿಯಲ್ಲಿ ಪರಿಹಾರ ಘೋಷಿಸಲಾಗಿತ್ತು.ನಮ್ಮ ರಾಜ್ಯಕ್ಕೂ ಅದೇ ರೀತಿ ಪರಿಹಾರ ಕೊಡಲು ಮನವಿ ಮಾಡಿದ್ದೇವೆ. ಒಂದೆರಡು ದಿನಗಳಲ್ಲಿ ಪ್ರಧಾನಿ ಮೋದಿಯವರು ಆದೇಶ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆದರುತ್ತಾರೆ ಎಂದು ಸಿದ್ದರಾಮಯ್ಯನವರು ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ಒಂದು ಕುಟುಂಬಕ್ಕೆ ಹೆದರುತ್ತಾರೆ. ಆದರೆ ನಮ್ಮದು ಪ್ರಜಾಪ್ರಭುತ್ವದ ವ್ಯವಸ್ಥೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಯಾವ ಕಾಲದಲ್ಲಿ ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ