ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಇಂದು ಆರಂಭ

ಜಮ್ಮು: ಇಷ್ಟು ದಿನಗಳ ನಿಷೇಧಾಜ್ಞೆಯ ಬಳಿಕ ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶನಿವಾರ 2ಜಿ ವೇಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪುನರಾರಂಭವಾಗಿದೆ.
ಇಂದು ಬೆಳಗ್ಗೆಯಿಂದಲೇ ಜಮ್ಮು, ರಜೌರಿ ಜಿಲ್ಲೆಯಲ್ಲಿ ಕೂಡ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಜಮ್ಮು, ರಿಯಾಸಿ, ಸಾಂಬಾ, ಕಥುವಾ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ಮರು ಆರಂಭಿಸಲಾಗಿದ್ದು 2ಜಿ ಸ್ಪೀಡ್ ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರೀತಿಯ ವದಂತಿ ಹಬ್ಬಿಸುವುದು ಅಥವಾ ಅನಪೇಕ್ಷಿತ, ಆಕ್ಷೇಪಾರ್ಹ ವಿಷಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಇಂತಹ ಅನಗತ್ಯ ವದಂತಿಗಳು ಹರಡದಂತೆ, ಗೊಂದಲ, ಆತಂಕಕಾರಿ ವಾತಾವರಣ ಸೃಷ್ಟಿಯಾಗಬಾರದೆಂದು ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಭಾಗಶಃ ಇಂದು ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಆರಂಭವಾಗಿದ್ದು ಹೈಸ್ಪೀಡ್ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರ ಮತ್ತು ಲಡಾಕ್ ಗೆ  ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಕಳೆದ ಆಗಸ್ಟ್ 4ರಂದು ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ಜಿಲ್ಲಾಡಳಿತ ಅಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ನಿಗಾವಹಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇರಿಸಿದೆ.
ಈ ಮಧ್ಯೆ ರಜೌರಿ ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿ ನಿಷೇಧ ಸಡಿಲಿಸಲಾಗಿದ್ದು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ.
ಮೊಬೈಲ್ ಇಂಟರ್ನೆಟ್ ಸೇವೆ ಆರಂಭವಾಗುತ್ತಿದ್ದಂತೆ ಜಮ್ಮು-ಕಾಶ್ಮೀರ ಮತ್ತು ಲಡಾಕ್ ನ ಜನರು ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ