
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಯಾದ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡುವ ಅಥವಾ ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ಜನತೆ ದಂಗೆ ಏಳಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡಜನತೆ ದಂಗೆ ಏಳಬಹುದು, ಎಚ್ಚರ ಇರಲಿ. ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಮುಚ್ಚುವ ಮತ್ತು ಪಡಿತರ ಯೋಜನೆಯಲ್ಲಿ ಎರಡು ಕೆ.ಜಿ. ಅಕ್ಕಿ ಕಡಿತಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.