ಬೆಂಗಳೂರು,ಆ.17- ನಗರದಲ್ಲಿ ಸಮರ್ಪಕ ಘನತ್ಯಾಜ್ಯ ವಿಲೇವಾರಿಗೆ ಆಯಾ ವಾರ್ಡ್ಗಳ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಮುಖ್ಯಸ್ಥ ಸುಭಾಷ್ ಬಿ ಅಡಿ ಮನವಿ ಮಾಡಿದರು.
ಘನತ್ಯಾಜ್ಯ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾಲಿಕೆ ಸಭೆಯಲ್ಲಿಂದು ಹಮ್ಮಿಕೊಂಡಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮೊದಲು ಘನತ್ಯಾಜ್ಯ ನಿರ್ವಹಣೆ ಕುರಿತಂತೆ ದಕ್ಷಿಣ ಭಾರತಕ್ಕೆ ಒಂದು ಪ್ರಾದೇಶಿಕ ಸಮಿತಿ ಇತ್ತು. ಹಸಿರು ನ್ಯಾಯಾಧಿಕರಣ ಕಳೆದ ಜನವರಿಯಲ್ಲಿ ಆಯಾ ರಾಜ್ಯಗಳಿಗೆ ಪ್ರತ್ಯೇಕ ಸಮಿತಿ ಮಾಡಿದೆ. ರಾಜ್ಯ ಸಮಿತಿಯ ಮುಖ್ಯಸ್ಥನಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ನಮ್ಮ ರಾಜ್ಯದಲ್ಲಿ ಪ್ರತಿ ನಿತ್ಯ ಉತ್ಪತ್ತಿಯಾಗುವ 12 ಸಾವಿರ ಟನ್ಗೂ ಹೆಚ್ಚು ಕಸವನ್ನು ಯಾವ ರೀತಿ ಸಮರ್ಪಕವಾಗಿ ನಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ಹಸಿರು ನ್ಯಾಯಾಧಿಕರಣ ಸಮಿತಿ ರಚಿಸಿದೆ.ನಾನು ಹಲವಾರು ಕಡೆ ಈಗಾಗಲೇ ಸಭೆ ಮಾಡಿದ್ದೇನೆ. ಅಲ್ಲದೆ, ಇದೇ 20ರಂದು ಮತ್ತೊಂದು ಸಭೆ ನಡೆಸುತ್ತೇವೆ ಎಂದು ತಿಳಿಸಿದರು.
ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ.ಇದರಲ್ಲಿ ಶೇ.40ರಷ್ಟನ್ನು ಮಾತ್ರ ಸಂಸ್ಕರಿಸಲಾಗುತ್ತದೆ.ಉಳಿದ ಶೇ.60ರಷ್ಟು ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತಿದೆ.ಸುಪ್ರೀಂಕೋರ್ಟ್ ಹಾಗೂ ಎನ್ಜಿಟಿ ಮಾರ್ಗದರ್ಶನದಂತೆ ತ್ಯಾಜ್ಯವನ್ನು ಕ್ವಾರಿಗಳಿಗೆ ಸುರಿಯಬಾರದು.ಆದರೆ, ಬೆಂಗಳೂರಿನಲ್ಲಿ ಇಂತಹ ಕ್ವಾರಿಗಳಲ್ಲಿ ಕಸ ಸುರಿಯುತ್ತಿದ್ದಾರೆ.ಇದನ್ನು ತಪ್ಪಿಸಬೇಕು ಎಂದು ಸಲಹೆ ಮಾಡಿದರು.
ಕಸ ಸಂಸ್ಕರಣೆಗಾಗಿಯೇ ನಗರದ ಸುತ್ತಮುತ್ತ ಏಳು ಘಟಕಗಳನ್ನು ನಿರ್ಮಿಸಿದ್ದೀರಾ. ನಾನು ಇತ್ತೀಚೆಗೆ ಬೆಳ್ಳಳ್ಳಿ ಕ್ವಾರಿಗೆ ಭೇಟಿ ನೀಡಿ ಪರಿಶೀಲಿಸಿದೆ.ಆದರೆ, ಅಲ್ಲಿ ಸಮಪರ್ಕಕವಾಗಿ ಕಸ ಸಂಸ್ಕರಿಸುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಭಾರೀ ತೊಂದರೆ ಎದುರಿಸಬೇಕಾಗುತ್ತದೆ ಎಂದರು.
ಆಯಾ ವಾರ್ಡ್ಗಳಲ್ಲಿರುವ ಜನಪ್ರತಿನಿಧಿಗಳು ಕಸ ವಿಂಗಡಣೆಗೆ ಆಧ್ಯತೆ ನೀಡಬೇಕು.ಇದಕ್ಕೆ ಅಧಿಕಾರಿಗಳು, ಸಾರ್ವಜನಿಕರು ಕೈ ಜೋಡಿಸಬೇಕು.ಇದರಿಂದ ಕಸದಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ತಪ್ಪಿಸಬಹುದೆಂದು ಸುಭಾಷ್ ಬಿ ಅಡಿ ತಿಳಿಸಿದರು.