ಬೆಂಗಳೂರು,ಆ.16-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧತೆಯಿಂದ ಅನ್ನಭಾಗ್ಯ ಯೋಜನೆಯನ್ನು ತಂದಿದ್ದಾರೆ. ನಮ್ಮ ಹಳೆ ಯೋಜನೆ ಕೈ ಬಿಡುವುದು ಸರಿಯಲ್ಲ.
ರದ್ದು ಪಡಿಸುವುದನ್ನು ಮಾಡಬಾರದು.ನಮ್ಮ ಯೋಜನೆಗೆ ಬಗ್ಗೆ ನಮಗೆ ಬದ್ಧತೆಯಿದೆ.ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಅದರಂತೆ ಅವರು ನಡೆದುಕೊಳ್ಳಬೇಕು. ನಮ್ಮ ಕಾರ್ಯಕ್ರಮ ತೆಗೆದರೆ ನಾವು ಸುಮ್ಮನಿರುವುದಿಲ್ಲ. ಅದರ ಬಗ್ಗೆ ವಿಸ್ತೃತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೈತರಿಗೆ ಸಿದ್ದರಾಮಯ್ಯ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ರು. ಈಗ ಆ ಘೋಷಣೆಗೆ ಅವರು ಹೊಸ ಬಣ್ಣ ಹಾಕೊಂಡು ಹೊರಟಿದ್ದಾರೆ.ಇವಾಗ ನಾನು ಹೊಸದಾಗಿ ಮಾಡಿದ್ದೇನೆ ಅಂತಾ ಎಲ್ಲಾ ಕಡೆ ಜಾಹೀರಾತು ಕೊಟ್ಟು ಚೆನ್ನಾಗಿ ಕಾಣ್ತಿದ್ದಾರೆ.ಯಡಿಯೂರಪ್ಪ ಚೆನ್ನಾಗಿ ಕಾಣಲಿ.ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯ ಘೋಷಣೆ ಮಾಡಿದ ಯಾವುದೇ ಕಾರ್ಯಕ್ರಮಗಳನ್ನು ತಡೆ ಹಿಡಿಯಬಾರದು ಎಂದು ಮನವಿ ಮಾಡಿದರು.
ಒಂದು ವೇಳೆ ರದ್ದು ಮಾಡಿದರೆ ನಾವಂತೂ ಸುಮ್ಮನೆ ಕೂರೋದಿಲ್ಲ. ನಮಗೂ ಒಂದು ಬದ್ದತೆ ಇದೆ.ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡೋದಿಲ್ಲ ಎಂದು ಹೇಳಿದ್ದಾರೆ.ಅವರು ನುಡಿದಂತೆ ನಡೆದುಕೊಂಡರೆ ಅಷ್ಟೇ ಸಾಕು.ಒಂದು ವೇಳೆ ನಮ್ಮ ಕಾರ್ಯಕ್ರಮ ನಿಲ್ಲಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ವಿಚಾರವಾಗಿ ಪ್ರತಿಕ್ರಿಯಿಸಿ, ಕೊಡಗು, ಮಲೆನಾಡು, ಉತ್ತರಕರ್ನಾಟಕದಲ್ಲಿ ಪ್ರವಾಹ ಆಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ಸಿಎಂ ಪ್ರತಿ ಮನೆಗೆ 5 ಸಾವಿರ ಕೊಡುತ್ತೇನೆ ಎಂದು ಹೇಳಿದ್ದಾರೆ.ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಳ್ಳಲಿ.ದೆಹಲಿಯಿಂದ ಎಷ್ಟು ಗಿಫ್ಟ್ ತರುತ್ತಾರೆ ನೊಡೋಣ ಎಂದು ಕುಹಕವಾಡಿದರು.
ನಾನು ಸೀನಿಯರ್ ಅಲ್ಲ, ಜೂನಿಯರ್
ಕೆಪಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ವಿಚಾರವಾಗಿ ನಾನು ಸೀನಿಯರ್ ಅಲ್ಲ, ನಾನೊಬ್ಬ ಜೂನಿಯರ್.ಆ ವಿಚಾರವನ್ನು ನಮ್ಮ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ.ನನಗೆ ಯಾವ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ಹಾಲಿ ಕೆಪಿಸಿಸಿ ಅಧ್ಯಕ್ಷರಿಗೆ ನಾನು ಸಹಕಾರ ಕೊಡುತ್ತೇನೆ. ಇತರರು ಸಹಕಾರ ಕೊಡಲಿ ಎಂದು ಸಲಹೆ ಮಾಡಿದರು.
ಯಾವ ಫೋನ್ ಟ್ಯಾಪಿಂಗ್ ಕೂಡ ಆಗಿಲ್ಲ?
ಫೋನ್ ಟ್ಯಾಪಿಂಗ್ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಯಾವದೇ ಫೋನ್ ಟ್ಯಾಪಿಂಗ್ ಆಗಿಲ್ಲ. ಮಾಧ್ಯಮಗಳಿಗೆ ಅದು ಹೇಗೆ ಸಿಗ್ತೋ ಗೊತ್ತಿಲ್ಲ. ನಾನು ಇದರ ಬಗ್ಗೆ ವಿಚಾರಿಸಿದ್ದೇನೆ. ಸಿಎಂ ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಸ್ಪಷ್ಟನೆ ನೀಡಿದರು.
ಇದರ ಬಗ್ಗೆ ಆರ್.ಅಶೋಕ್ ಆರೋಪ ವಿಚಾರ ಕುರಿತು ಮಾತನಾಡಿದ ಡಿಕೆಶಿ, ಹಿಂದಿನ ಗೃಹ ಸಚಿವರಿಗೆ ರಾಜಕಾರಣ ಬೇಕಾಗಿದೆ. ಹಾಗಾಗಿ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ನಮ್ಮ ಮೇಲೆಲ್ಲ ರೇಡ್ ಗಳು ನಡೆದಿದೆ.ಆಗ ನಮ್ಮ ಮೇಲೆ ಸುಮ್ಮ ಸುಮ್ಮನೆ ಟ್ಯಾಪಿಂಗ್ ಮಾಡಿದ್ರಾ.ಅವರು ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಏನ್ ಬೇಕೋ ಮಾಡಲಿ,ಹೇಳಲಿ. ಬಿಜೆಪಿಯವರು ನಮ್ಮ ಫೋನ್ ಕದ್ದಾಲಿಸಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದರು.
50 ಲಕ್ಷ ಸಿಎಂ ಪರಿಹಾರ ನಿಧಿಗೆ
ನೆರೆ ಸಂತ್ರಸ್ತರ ನೆರವಿಗೆ ಧಾವಿಸಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಸಿಎಂ ಬಿಎಸ್ ವೈ ಇದೀಗ ದೆಹಲಿಗೆ ಹೋಗಿದ್ದಾರೆ.ಅಲ್ಲಿಂದ ಎಷ್ಟು ಗಿಫ್ಟ್ ತರ್ತಾರೆ ನೊಡೋಣ.ನಾನು 50 ಲಕ್ಷ ಸಿಎಂ ಪರಿಹಾರ ನಿಧಿಗೆ ಕೊಡ್ತೇನೆ ಎಂದು ಹೇಳಿದರು.