ಕೇಂದ್ರದಿಂದ ಕೇವಲ ಭರವಸೆಯ ಆಶ್ವಾಸನೆ

ಬೆಂಗಳೂರು,ಆ.16- ಹರ್ಷದ ಕೂಳಿಗೆ ವರ್ಷದ ಕೂಳಿನ್ನು ನಂಬಿಕೊಂಡು ಕೆಟ್ಟರು ಎಂಬ ನಾಣ್ನುಡಿಯಂತೆ ಕೇಂದ್ರ ಸರ್ಕಾರ ಪ್ರವಾಹ ಪೀಡಿತ ರಾಜ್ಯಕ್ಕೆ ಪರಿಹಾರ ನೀಡುತ್ತಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿಯಾಗಿ ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದರೂ ಕೇಂದ್ರದಿಂದ ಕೇವಲ ಭರವಸೆಯ ಆಶ್ವಾಸನೆ ಸಿಕ್ಕಿದೆ ಹೊರತು ತುರ್ತು ಪರಿಹಾರಕ್ಕೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ.

ಕೇಂದ್ರ ಈ ನಡೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ.ಯಡಿಯೂರಪ್ಪ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ ಎಂದು ಅಬ್ಬರಿಸುತ್ತಿದ್ದರು.

ಈಗ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವುದಾದರೂ ಏನು..? 16ಜಿಲ್ಲೆಗಳ 86 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.60ಕ್ಕೂ ಹೆಚ್ಚು ಜನ ಸಾವನ್ನಪ್ಪಿ. ಒಂದು ಲಕ್ಷಕ್ಕೂ ಕೋಟಿ ಅಧಿಕ ನಷ್ಟ ಸಂಭವಿಸಿದೆ.ರಾಜ್ಯಕ್ಕೆ ತಕ್ಷಣವೇ ಐದು ಸಾವಿರ ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಇರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಆದರೆ ಯಡಿಯೂರಪ್ಪ ಮಾತ್ರ ಸಾಗಹಾಕುವ ಪ್ರಯತ್ನ ಮಾಡಿದ್ದು, ಕೇಂದ್ರದಿಂದ ನಮಗೆ ಎಲ್ಲರೀತಿಯ ನೆರವು ಸಿಗಲಿದ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಶೀಘ್ರದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬರಲಿದೆ.ನಾವು ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದ್ದೇವೆ. ಪ್ರಧಾನಿ ಅವರು, ರಾಜ್ಯಕ್ಕೆ ನೆರವು ನೀಡಲಿದ್ದಾರೆಂಬ ವಿಶ್ವಾಸವಿದೆ.ಕಾದು ನೋಡೋಣ ಎನ್ನುವ ಮೂಲಕ ಕೇಂದ್ರದಿಂದ ಪರಿಹಾರ ಇನ್ನು ಮರಿಚೀಕೆ ಎಂಬ ಸುಳಿವು ನೀಡಿದ್ದಾರೆ.

ವಾಸ್ತವವಾಗಿ ಸಿಎಂ ಯಡಿಯೂರಪ್ಪನವರು ಶುಕ್ರವಾರ ದೆಹಲಿಗೆ ಬಂದಾಗಲೆ ಪ್ರಧಾನಿಯವರು ರಾಜ್ಯಕ್ಕೆ ಕನಿಷ್ಟ ಪಕ್ಷ 3ಸಾವಿರ ಕೋಟಿ ತುರ್ತು ಪರಿಹಾರ ಇಲ್ಲವೆ. ವಿಶೇಷ ಪ್ಯಾಕೇಜ ಘೋಷಣೆ ಮಾಡಲಿದ್ದಾರೆಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.
ಏಕೆಂದರೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಗೃಹಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಿದ್ದರು.ಅಲ್ಲದೆ ಯಡಿಯೂರಪ್ಪನವರೆ ಪ್ರಧಾನಿ ಕಾರ್ಯಾಲಯ, ಹಣಕಾಸು ಮತ್ತು ಗೃಹ ಇಲಾಖೆಗೆ ರಾಜ್ಯದ ಸಂಪೂರ್ಣ ಮಾಹಿತಿಯನ್ನು ದಾಖಲೆಗಳನ್ನು ವರದಿ ನೀಡಿದ್ದರು.

ಹೀಗಾಗಿ ಯಡಿಯೂರಪ್ಪ ದೆಹಲಿಗೆ ಬಂದಾಗ ಸಂತ್ರಸ್ತರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ನಿರೀಕ್ಷೆ ಎಲ್ಲರಲ್ಲೂ ಮನೆಮಾಡಿತ್ತು.ಆದರೆ ಮೋದಿ ಎಂದಿನಂತೆ ಕೂಗಿಗೆ ತುಪ್ಪ ಸವರುವ ಕೆಲಸ ಮಾಡಿ.ಸಂತ್ರಸ್ತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕುವಂತೆ ಮಾಡಿದ್ದಾರೆ.
2009ರಲ್ಲಿ ರಾಜ್ಯದಲ್ಲಿ ಇದೇ ಪರಿಸ್ಥಿತಿ ಉಂಟಾದಾಗ ಹಿಂದೆ ಯುಪಿಎ ಸರ್ಕಾರ ರಾಜ್ಯಕ್ಕೆ 2ಸಾವಿರ ಕೋಟಿ ಪರಿಹಾರ ನೀಡಿತ್ತು.ಈಗ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಕರ್ನಾಟಕದ ಜನತೆಗೆ ಪರಿಹಾರ ನೀಡಿ ಸಂಕಷ್ಟದಲ್ಲಿರು ಜನರ ಕಣ್ಣೀರು ತೊಳೆಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಇದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮುನ್ನ ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದರು.ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ.ಪ್ರವಾಹ ಅಥವಾ ಬರವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ.

ನಾವು ತೆರಿಗೆ ಕಟ್ಟುತ್ತೇವೆ. ಕೇಂದ್ರ ಸರ್ಕಾರ ಏಕೆ ಪರಿಹಾರ ನೀಡುತ್ತಿಲ್ಲ ಎಂದು ಅಬ್ಬರಿಸುತ್ತಿದ್ದರು.ಆದರೆ ಇಂದು ಅದೇ ಯಡಿಯೂರಪ್ಪ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಬಾಯಿ ಬಿಡದಂತಹ ಸ್ಥಿತಿಗೆ ಬಂದಿದ್ದಾರೆ.

ಏಕೆಂದರೆ ಈಗ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ.ಮೇಲಾಗಿ ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರವಿದೆ.ಎಲ್ಲಕ್ಕಿಂತ ಹೆಚ್ಚಾಗಿ ಭವಿಷ್ಯದಲ್ಲಿ ತಮ್ಮ ಕುರ್ಚಿ ಉಳಿದಿರುವ ದಿನಗಳ ಮಟ್ಟಿಗಾದರೂ ಗಟ್ಟಿಯಾಗಿರಲಿ ಎಂಬ ಕಾರಣಕ್ಕಾಗಿ ಬಿಎಸ್‍ವೈ ಮೌನಕ್ಕೆ ಶರಣಗಾಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ