ಬೆಂಗಳೂರು,ಆ.16-“ಕೇಂದ್ರ ಸರ್ಕಾರ ನಮ್ಮ ಫೋನ್ ಟ್ಯಾಪ್ ಮಾಡುತ್ತಿದೆ. ಇಂದಿಗೂ ನಮ್ಮ ಫೋನ್ ಕದ್ದಾಲಿಕೆ ನಡೆಯುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು,ದೂರವಾಣಿ ಕದ್ದಾಲಿಕೆ ಬಗ್ಗೆ ಏಕೆ ಸಮಯ ವ್ಯರ್ಥ ಮಾಡ್ತಿದ್ದಾರೆ ಗೊತ್ತಿಲ್ಲ. ಫೋನ್ ಟ್ಯಾಪಿಂಗ್ ನಡೆದಿದ್ದರೇ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಫೋನ್ ಟ್ಯಾಪಿಂಗ್ ಬಗ್ಗೆ ಬಿಜೆಪಿ ನಾಯಕರು ಮಾತಾಡ್ತಿದ್ದಾರೆಯೇ ಹೊರತು ತನಿಖೆ ನಡೆಸಲು ಅವರದೇ ಸರ್ಕಾರ ಹಿಂದೇಟು ಹಾಕ್ತಿದೆ.ನನ್ನ ಫೋನ್ ಇವತ್ತಿಗೂ ಕೂಡ ಟ್ಯಾಪಿಂಗ್ ಆಗ್ತಿದೆ.ಕೇಂದ್ರ ಸರ್ಕಾರ ನನ್ನ ಫೋನ್ ಟ್ಯಾಪ್ ಮಾಡಿದೆ. ಫೋನ್ ಟ್ಯಾಪಿಂಗ್ ಈಗ ಸಾಮಾನ್ಯ ಆಗಿಬಿಟ್ಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರು.
“ನಮ್ಮ ಸರ್ಕಾರದ ಜನಪರ ಕಲ್ಯಾಣ ಯೋಜನೆಗಳನ್ನು ಕಡಿತಗೊಳಿಸುವುದು ಸರಿಯಲ್ಲ. ಬಡಜನರ ಯೋಜನೆ ಕಡಿತಕ್ಕೆ ಕೈಹಾಕಿರುವುದು ತಪ್ಪು .ಸರ್ಕಾರ ಇಂತಹ ಕೆಲಸವನ್ನು ಮಾಡಬಾರದು.ಶೇ 50ರಷ್ಟು ತಾಲೂಕು ಬರಪೀಡಿತವಾಗಿವೆ. ಅನ್ನಭಾಗ್ಯ ಯೋಜನೆ ಬಡ ಕುಟುಂಬಕ್ಕೆ ಆಧಾರವಾಗಿದೆ” ಎಂದರು.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳು ಬಡವರಿಗೆ ತಲುಪಿರುವ ಯೋಜನೆಗಳು.ಈ ಯೋಜನೆಗಳಿಗೆ ಹಣಕಾಸನ್ನು ಕಡಿತ ಮಾಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಇದು ಹೀಗೆಯೇ ಮುಂದುವರೆದರೆ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಅವರದ್ದು ಒನ್ ಮ್ಯಾನ್ ಶೋ.ದೆಹಲಿಗೆ ಹೋದರೂ ಸಂಪುಟ ವಿಸ್ತರಣೆಯ ಅವರ ಉದ್ದೇಶ ಇನ್ನೂ ಈಡೇರಿಲ್ಲ. ಪ್ರವಾಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಯಡಿಯೂರಪ್ಪ ರಾಜ್ಯಕ್ಕೆ ಕರೆದುಕೊಂಡು ಬರಬೇಕಾಗಿತ್ತು. ಮಹಾರಾಷ್ಟ್ರ, ಕೇರಳ ಪ್ರವಾಹಕ್ಕೆ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಇನ್ನೂ ಪರಿಹಾರವನ್ನೇ ಘೋಷಿಸಲಿಲ್ಲ. ರಾಜ್ಯದ ಮೇಲೆ ಅವರಿಗೆ ಕಾಳಜಿ ಇದ್ದಿದ್ರೆ ಇವತ್ತೆ ಪ್ರಧಾನಿಗಳಿಂದ ಪರಿಹಾರ ಘೋಷಣೆ ಮಾಡಿಸಬೇಕಿತ್ತು.ರಾಜ್ಯಕ್ಕೆ ಇಷ್ಟು ಪರಿಹಾರ ಬೇಕು ಅಂತಾ ಪ್ರಕಟ ಮಾಡಿಸಬೇಕಿತ್ತು. ಯಡಿಯೂರಪ್ಪ ಸುಮ್ಮನೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಿ ಬರೋದು ಸರಿಯಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನದ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ಅದು ಬಿಜೆಪಿಯ ಆಂತರಿಕ ವಿಷಯ.ಅದು ನಮಗೆ ಬೇಕಾಗಿಲ್ಲ. ಅವರು ಯಾರಿಗೆ ಯಾವ ಸ್ಥಾನ ಕೊಡ್ತಾರೆ ಅನ್ನೋದು ನಮಗೆ ಬೇಕಿಲ್ಲ. ನಮಗೆ ಬೇಕಿರೋದು ರಾಜ್ಯದ ಅಭಿವೃದ್ಧಿ ಮಾತ್ರ.ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸೂಕ್ತ ಪರಿಹಾರ ಕೊಡಿಸಲಿ ಅಷ್ಟೇ ಎಂದು ಕೇಂದ್ರ ಸರ್ಕಾರಕ್ಕೆ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
“ದೆಹಲಿಗೆ ಭೇಟಿ ನೀಡಿ ಪ್ರಧಾನಿ ಭೇಟಿ ಮಾಡಿದ್ದೀರಿ. ಆದರೆ ಇನ್ನೂ ಕಚೇರಿಯಿಂದ ಒಂದು ಮಾಹಿತಿ ಹೊರ ಬಿದ್ದಿಲ್ಲ ಪ್ರಧಾನಿ ಭೇಟಿಯಾದರೆ ಸಾಲದು. ಹೆಚ್ಚಿನ ಅನುದಾನವನ್ನು ತನ್ನಿ. ನೀವು ಪ್ರಧಾನಿ ಅವರನ್ನು ರಾಜ್ಯಕ್ಕೆ ಕರೆತರಬೇಕಿತ್ತು” ಎಂದು ಹೇಳಿದರು