![kodi-mutt-seer2-875](http://kannada.vartamitra.com/wp-content/uploads/2019/08/kodi-mutt-seer2-875-1-572x381.jpg)
ಗದಗ: ಕೆಲವೇ ದಿನಗಳ ಮಳೆ ಮತ್ತು ಪ್ರವಾಹಗಳಿಗೆ ಇಡೀ ಕರುನಾಡು ಜರ್ಝರಿತಗೊಂಡಿದೆ. ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬರುವಂತಾಗಿದೆ. ಈಗಷ್ಟೇ ಮಳೆ ಮತ್ತು ಪ್ರವಾಹದ ತೀವ್ರತೆ ತಗ್ಗಿದೆ ಎಂದು ಜನರು ತುಸು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ಕೋಡಿಮಠದ ಶ್ರೀಗಳು ಈ ಜಲಕಂಟಕ ಇನ್ನೂ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಇಡೀ ಜಗತ್ತು ಬೆಚ್ಚಿಬೀಳುವಂತಹ, ಹಿಂದೆಂದೂ ಕಂಡು ಕೇಳರಿಯದ ಆಘಾತವೊಂದು ಅಪ್ಪಳಿಸಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ದೊಡ್ಡ ದೊಡ್ಡ ನಗರಗಳಿಗೆ ಅಪಾಯವಾಗಬಹುದೆಂದೂ ಅವರು ಹೇಳಿದ್ದಾರೆ.
ಬಾಗಲಕೋಟೆಯ ಪ್ರವಾಹಪೀಡಿತ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಮಠದ ಸ್ವಾಮಿಗಳು, ಮುಂದಿನ 3 ತಿಂಗಳವರೆಗೆ ಜಲ ಕಂಟಕ ಇದೆ ಎಂದು ತಿಳಿಸಿದ್ದಾರೆ. ಇದೇ ತಿಂಗಳಲ್ಲಿ ಮತ್ತೊಮ್ಮೆ ಭೀಕರ ಪ್ರವಾಹ ಬರುತ್ತದೆ. ಇನ್ನೆರಡು ತಿಂಗಳ ಬಳಿಕ ಬರುವ ಕಾರ್ತಿಕ ಮಾಸದವರೆಗೂ ಈ ಜಲಬಾಧೆ ಮುಂದುವರಿಯುತ್ತದೆ ಎಂದವರು ಅಭಿಪ್ರಾಯಪಟ್ಟಿದ್ಧಾರೆ.
ಈ ವರ್ಷ ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತಗಳು ಸಂಭವಿಸುತ್ತವೆ. ಈಗ ಜಲ ಆಘಾತವಾಗುತ್ತಿದೆ. ಮುಂದಿನ ದಿನಗಳಲ್ಲಿ ಭೂ ಆಘಾತಗಳಾಗುತ್ತವೆ. ಭೂಮಿ ನಡುಗುವುದು, ಭೂಕುಸಿತವಾಗುವುದು ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಕುಸಿಯುವುದು ಸಂಭವಿಸುತ್ತವೆ.
ಹಾಗೆಯೇ ಜಗತ್ತು ಕಂಡರಿಯದ ವಾಯು ಆಘಾತವೊಂದು ಆಗುವ ಲಕ್ಷಣ ಇದೆ ಎಂದು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಯಾವ ರೀತಿಯ ವಾಯು ಆಘಾತ ಎಂಬುದನ್ನು ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಜನರಲ್ಲಿ ಭಕ್ತಿಭಾವ, ದೈವ ನಂಬಿಕೆ, ವಿಶ್ವಾಸಗಳು ಕಡಿಮೆಯಾಗಿವೆ. ಪ್ರಕೃತಿಯೇ ಈ ರೀತಿಯಲ್ಲಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವರು ಒಂದೊಂದೇ ಸೂಚನೆ ಕೊಡುವಂತೆ ಈ ಪ್ರವಾಹವೂ ಒಂದು ಸೂಚನೆಯಾಗಿದೆ ಎಂದು ಶ್ರೀಗಳು ತಮ್ಮದೇ ವ್ಯಾಖ್ಯಾನ ನೀಡಿದರು.
ಇನ್ನು, ಪ್ರವಾಹದಿಂದ ಶಿವಯೋಗಿ ಮಂದಿರಕ್ಕೆ ಹಾನಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇಲ್ಲಿ ನೂರಾರು ಕೋಟಿ ರೂ ನಷ್ಟವಾಗಿದೆ. ಸರ್ಕಾರ ಮತ್ತು ಜನರು ಈ ಮಂದಿರಕ್ಕೆ ಸಹಾಯ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.