ಬೆಂಗಳೂರು, ಆ.12- ಮಳೆ ಕಡಿಮೆಯಾಗುತ್ತಿದೆ, ಪ್ರವಾಹದ ಅಬ್ಬರ ತಗ್ಗಿದೆ, ನೆರೆಯಲ್ಲಿ ಬದುಕು ಕಳೆದುಕೊಂಡವರು ಪುನರ್ ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂತ್ರಸ್ತರಿಗೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ.
ಕಳೆದ 12 ದಿನಗಳಿಂದ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿದ ಮಳೆ, ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡವರು ಆಸರೆಗಾಗಿ ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳು ಅಕ್ಷರಶಃ ಮಳೆಯ ಹೊಡೆತಕ್ಕೆ ನಲುಗಿಹೋಗಿದ್ದು ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಳೆ ಕಡಿಮೆಯಾಗಿ ಪ್ರವಾಹ ತಗ್ಗುತ್ತಿರುವ ಹಿನ್ನೆಲೆಯಲ್ಲಿ ನಮಗೆ ಮನೆ ನಿರ್ಮಾಣ ಮಾಡಿಕೊಡಿ. ನೀರಿನಲ್ಲಿ ನಮ್ಮ ಮನೆ ಕೊಚ್ಚಿ ಹೋಗಿದೆ. ಇರಲು ಒಂದು ಸೂರು ಬೇಕಾಗಿದೆ ಎಂದು ಮಹಿಳೆಯರು, ವೃದ್ಧರು ಸಂತ್ರಸ್ಥರ ಕೇಂದ್ರಗಳಲ್ಲಿ ಅಂಗಲಾಚುತ್ತಿದ್ದುದು ಕಂಡು ಬಂದಿತು.
ಪ್ರವಾಹ ಭೀತಿಯಿಂದ ಊರು ತೊರೆದವರು ಅದೆಷ್ಟೋ ಮಂದಿ. ಪ್ರವಾಹಕ್ಕೀಡಾಗಿ ಮನೆ ಕುಸಿದು ತಮ್ಮವರನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಿಗೆ ಸೇರಿರುವರು ಮತ್ತಷ್ಟು ಮಂದಿ. ತಮಗೆ ನೆಲೆ ಕಲ್ಪಿಸಿಕೊಡುವಂತೆ ಆಗ್ರಹಿಸುತ್ತಿದ್ದಾರೆ. ಯಾವುದೇ ಪರಿಹಾರ ಕೇಂದ್ರಗಳಿಗೆ ಕೇಂದ್ರ ಸಚಿವರು, ಮುಖ್ಯಮಂತ್ರಿ, ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದರೂ ಕೇಳಿಬರುವುದು ನಾವು ಊರಿಗೆ ಹೋಗಬೇಕು. ನಮಗೆ ಸೂಕ್ತ ಪರಿಹಾರ ಒದಗಿಸಿಕೊಡಿ. ನಾವು ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ ಎಂಬ ಆರ್ತನಾದ.
800ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡು 1.5 ಲಕ್ಷ ಜನ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಗಳಲ್ಲಿರುವವರಿಗೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಅಗತ್ಯ ವಸ್ತುಗಳನ್ನು ದಾನಿಗಳಿಂದ ಸಂಗ್ರಹಿಸಿ, ಸಂತ್ರಸ್ಥರಿಗೆ ನೀಡಲಾಗುತ್ತಿದೆ. ಮಾಧ್ಯಮಗಳು ಕೂಡ ಪ್ರವಾಹ ಸಂತ್ರಸ್ಥರ ನೆರವಿಗೆ ಟೊಂಕ ಕಟ್ಟಿ ನಿಂತಿವೆ. ಪಕ್ಷಾತೀತವಾಗಿ ಎಲ್ಲರೂ ಪ್ರವಾಹ ಪೀಡಿತರ ನೆರವಿಗೆ ಧಾವಿಸುತ್ತಿದ್ದಾರೆ. ನೆರೆ ಇಳಿದರೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಸತ್ತ ಪ್ರಾಣಿಗಳು, ಕೊಳೆತ ವಸ್ತುಗಳು, ಕೆಸರಿನಡಿ ಸಿಲುಕಿದ ಶವಗಳಿಂದಲೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಅಲ್ಲದೆ, ಕುಡಿಯುವ ಯೋಗ್ಯವಾದ ನೀರು ಸಿಗದೆ ಪ್ರವಾಹದ ನೀರನ್ನೇ ಕುಡಿದರೆ ರೋಗಗಳು ಹರಡುವ ಸಾಧ್ಯತೆ ಇದೆ. ಹಾಗಾಗಿ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮ ವಹಿಸಬೇಕಾಗಿದೆ.
ಕೆಲವೆಡೆ ಪ್ರವಾಹ ತಗ್ಗಿದ್ದರೂ, ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ಹಲವು ಗ್ರಾಮಗಳು ಜಲಾವೃತವಾಗಿದೆ. ಮಾನ್ವಿ ತಾಲೂಕಿನ ನದಿ ದಂಡೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಂತ್ರಾಲಯದ ಕಡೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಬಾಗಲಕೋಟೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮತ್ತೂರು, ಕಡಕೋಳ ಗ್ರಾಮಗಳು ಜಲಾವೃತಗೊಂಡಿದೆ.
ಇತ್ತ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯ ಪ್ರಭಾವ ಕಡಿಮೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಮಳೆ ಸೃಷ್ಠಿಸಿರುವ ಅವಾಂತರದಿಂದ ಜನಜೀವನ ಯಥಾಸ್ಥಿತಿಗೆ ಬರಲು ಸಾಧ್ಯವಾಗಿಲ್ಲ.
ಚಾರ್ಮಾಡಿ, ಶಿರಾಡಿಘಾಟ್ಗಳಲ್ಲಿ ಮತ್ತೆ ಗುಡ್ಡ ಕುಸಿದು ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿದೆ. ಕೆಆರ್ಎಸ್ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.