ಬೆಂಗಳೂರು, ಆ.12- ನೆರೆ ಹಾವಳಿಯಿಂದಾಗಿ ರಾಜ್ಯದ 18 ಜಿಲ್ಲೆಗಳು ಸಂಕಷ್ಟದಲ್ಲಿರುವುದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿದ್ದಾರೆ.
ಶಾಲಾ ದಾಖಲೆಗಳ ಪ್ರಕಾರ ಸಿದ್ದರಾಮಯ್ಯ ಅವರ ಜನ್ಮ ದಿನಾಂಕ 1948 ಆಗಸ್ಟ್ 12. ಪ್ರತಿ ವರ್ಷ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದರು.
ಈ ಬಾರಿ ಪ್ರವಾಹ ಪರಿಸ್ಥಿತಿಯಿಂದಾಗಿ ಹುಟ್ಟುಹಬ್ಬ ಆಚರಣೆಯಿಂದ ಸಿದ್ದರಾಮಯ್ಯ ದೂರ ಉಳಿದಿದ್ದಾರೆ. ಆದರೂ, ಡಾ.ನೆಲ್ಸನ್ಮಂಡೇಲ ಅಭಿಮಾನಿಗಳ ವೇದಿಕೆ ಇಂದು ಸಿದ್ದರಾಮಯ್ಯ ಅವರ ಸರ್ಕಾರಿ ಬಂಗಲೆ ಕಾವೇರಿ ಎದುರು ನಾದಸ್ವರ, ಡೋಲು, ಮಂಗಳವಾಧ್ಯ ನುಡಿಸುವ ಮೂಲಕ ಶುಭ ಹಾರೈಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಂ.ಎಸ್.ಮುತ್ತುರಾಜ್, ಪ್ರತಿ ವರ್ಷ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಟೌನ್ಹಾಲ್ ಬಳಿ ಮಾಡುತ್ತಿದ್ದೆವು. ಈ ಬಾರಿ ನೆರೆ ಹಾವಳಿಯಿಂದಾಗಿ ಆಚರಣೆಯನ್ನು ಕೈ ಬಿಡಲಾಗಿದೆ. ಸಾಂಕೇತಿಕವಾಗಿ ಮಂಗಳವಾದ್ಯ ನುಡಿಸುವ ಮೂಲಕ ಶುಭ ಹಾರೈಸಲಾಗಿದೆ ಎಂದರು.
ಮಂಗಳವಾದ್ಯ ನುಡಿಸಲು ಸುಮಾರು 500 ಕಾಲವಿದರನ್ನು ನಿಗದಿ ಮಾಡಲಾಗಿತ್ತು. ಆದರೆ, ಆ ಖರ್ಚನ್ನು ಕಡಿಮೆ ಮಾಡಿ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹುಟ್ಟುಹಬ್ಬ ಆಚರಣೆ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ನಾವು ಮಂಗಳವಾದ್ಯ ನುಡಿಸುತ್ತಿದ್ದರೂ ಅವರು ನಮ್ಮತ್ತ ತಲೆಯೆತ್ತಿಯೂ ನೋಡದೆ ತಮ್ಮ ಪಾಡಿಗೆ ತಾವು ಹೋದರು ಎಂದರು.
ಪ್ರೊ.ನರಸಿಂಹಯ್ಯ ಮಾತನಾಡಿ, ಅನ್ನಭಾಗ್ಯ ಸೇರಿದಂತೆ 24 ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯ ಅವರು, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಧ್ವನಿಯಾಗಿದ್ದಾರೆ. ಸವಿತಾ ಸಮಾಜಕ್ಕೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಉತ್ತಮ ಯೋಜನೆಗಳನ್ನು ಕೊಟ್ಟ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.